ಬೆಂಗಳೂರು: ಇಸ್ಪೀಟು ಆಡೋರು, ಜೂಜುಕೋರರು ಅಂತಾ ಆರೋಪ ಮಾಡಿರುವ ನೀವು ಯಾರಿಗೆ ಕಮ್ಮಿ ಇದ್ದೀರಾ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗೋ ಮುಖ್ಯಮಂತ್ರಿ ಆಗಿದ್ದೇನೆ ಎಂದು ದರ್ಪದಿಂದ ನಡದುಕೊಳ್ಳುತ್ತೀರಿ. ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದೀರಿ. ಭ್ರಷ್ಟಾಚಾರ ಹಗರಣಗಳನ್ನು ಮಾಡುವುದರಲ್ಲಿ ನೀವು ಯಾರಿಗೆ ಕಡಿಮೆ ಇದ್ದೀರಿ ಎಂದು ಬಿಎಸ್ವೈ ಪ್ರಶ್ನಿಸಿದ್ದಾರೆ.
ರೇವಣ್ಣ ವಿರುದ್ದ ಭೂ ಕಬಳಿಕೆ ಆರೋಪ ಮಾಡಿರುವುದು ನಾವಲ್ಲ. ಎ ಮಂಜು ಮಾಡಿರುವ ಆರೋಪದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಬೇಕು. ನಾಡಿನ ಆರೂವರೆ ಕೋಟಿ ಜನರಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಭ್ರಷ್ಟಾಚಾರ ಹಗರಣಗಳನ್ನು ಮಾಡೋದ್ರಲ್ಲಿ ನೀವು ಯಾರಿಗೆ ಕಡಿಮೆ ಇದ್ದೀರ? ಈ ಹಿಂದೆಯೂ ಭೂಮಿ ಲೂಟಿ ಮಾಡಿದ್ದೀರಿ. ಇನ್ನೊಬ್ಬರ ಮೇಲೆ ಮಾತಾಡೋದಕ್ಕೆ ನಿಮಗೆ ಯಾವ ನೈತಿಕತೆ ಇದೆ. ಇದು ಕ್ರಿಮಿನಲ್ ಅಪರಾಧವಲ್ಲವೇ? ಎಂದು ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ಇದೊಂದೇ ಅಲ್ಲ. ಹಿಂದೆ ಹಲವಾರು ಭೂ ಕಬಳಿಕೆ ಆರೋಪ ಪ್ರಕರಣಗಳೂ ಇವೆ. ಕೂಡಲೇ ಕ್ರಮಕ್ಕೆ ಮುಂದಾಗಿ ಎಂದು ಯಡಿಯೂರಪ್ಪ ಆಗ್ರಹಿಸಿದರು. ಕಾಂಗ್ರೆಸ್ ಪಕ್ಷ ಮೈತ್ರಿಯ ಪಾಲುದಾರ ಪಕ್ಷ. ಅವರ ಪಕ್ಷದ ಸದಸ್ಯ ಎ ಮಂಜು ಆರೋಪ ಮಾಡಿರುವ ಬಗ್ಗೆ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಏಕೆ ಮೌನವಾಗಿದ್ದಾರೆ? ಈ ಬಗ್ಗೆ ಅವರೂ ಕೂಡ ಮಾತನಾಡಬೇಕು ಎಂದು ಆಗ್ರಹಿಸಿದರು.
Click this button or press Ctrl+G to toggle between Kannada and English