ಉಪ್ಪಳ: ನವಂಬರ್ ತಿಂಗಳಲ್ಲಿ ಪೈವಳಿಕೆ ಪಂಚಾಯತ್ ಬೋಳಂಗಳವನ್ನು ಕೇಂದ್ರೀಕರಿಸಿ ನಡೆಯಲಿರುವ ” ಅಣ್ಣ-ತಮ್ಮ ದೈವ ಜೋಡುಕೆರೆ ಕಂಬಳ” ದ ಪೂರ್ವಭಾವಿ ಸಭೆಯು ಪೈವಳಿಕೆ ಲಾಲ್ ಭಾಗ್ ನಲ್ಲಿರುವ ಕುಲಾಲ ಮಂದಿರದಲ್ಲಿ ಪೈವಳಿಕೆ ಅರಮನೆಯ ಅರಸು ಬಲ್ಲಾಳರಾದ ರಂಗತ್ರೈ ಬಲ್ಲಾಳರಸರ ಅಧ್ಯಕ್ಷತೆ ಯಲ್ಲಿ ನಡೆಯಿತು.
ತುಳುನಾಡಿನ ಕೃಷಿ ಪ್ರಧಾನ ಜೀವನ ಶೈಲಿ ಮತ್ತು ಜಾನಪದೀಯ ಹಿನ್ನೆಲೆಯ ಕಂಬಳ ಕ್ರೀಡೆಗೆ ಅದರದ್ದೇ ಮಹತ್ವಗಳಿದ್ದು, ಆಧುನಿಕತೆಯ ವೇಗದಲ್ಲಿ ಬಹುತೇಕ ಮರೆಯಾಗುವ ಭೀತಿ ಗಡಿನಾಡು ಕಾಸರಗೋಡಿನದು. ದಶಕಗಳ ಹಿಂದೆ ಕಾಸರಗೋಡಿನ ಅಲ್ಲಲ್ಲಿ ನಡೆದುಬರುತ್ತಿದ್ದ ಕಂಬಳ ಉತ್ಸವ ಕೃಷಿ ಸಾಗುವಳಿಗಳು ಮರೆಯಾದಂತೆ ಹಿಂದೆ ಸರಿಯಿತು. ಪ್ರಸ್ತುತ ಜಿಲ್ಲೆಯಲ್ಲಿ ಅರಿಬೈಲಿನಲ್ಲಿ ಮಾತ್ರ ಕಂಬಳ ನಡೆದು ಬರುತ್ತಿದೆ.
ಪ್ರಾಚೀನ ತುಳುನಾಡಿನ ತುಳುವ ಅರಸರ ಪೈಕಿ ವಿಟ್ಲದ ಬಲ್ಲಾಳ ಅರಸರು ತಮ್ಮದೇ ಕೊಡುಗೆಗಳ ಮೂಲಕ ಸಂಸ್ಕೃತಿ ಸಂವರ್ಧನೆಯಲ್ಲಿ ಕೊಡುಗೆ ನೀಡಿದವರು. ವಿಟ್ಲ ಅರಸರ ವಿಭಾಗಕ್ಕೊಳಪಟ್ಟ ಮಂಗಲ್ಪಾಡಿ ಮಾಗಣೆಯ ಪೈವಳಿಕೆ ಅರಸರು ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಹೆಸರುಗಳಿಸಿದವರು. ಶ್ರೀ ಚಿತ್ತಾರಿ ಉಳ್ಳಾಲ್ತಿ, ಅಣ್ಣ ತಮ್ಮ ದೈಗಳ ಕೃಪೆಯಿಂದ ಆಳ್ವಿಕೆ ನಡೆಸುತ್ತ ಬಂದವರಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಅಳಿಯುತ್ತಿರುವ ಕಂಬಳ ಕ್ರೀಡೆಯನ್ನು ಮತ್ತೆ ಉಚ್ಚ್ರಾಯಕ್ಕೆ ತರುವ ನಿಟ್ಟಿನಲ್ಲಿ ಮೊದಲ ಹಂತದ ಸಮಾಲೋಚನೆ ನಡೆಯುತ್ತಿದೆ.
ಪೈವಳಿಕೆ ಲಾಲ್ ಭಾಗ್ ನಲ್ಲಿರುವ ಕುಲಾಲ ಮಂದಿರದಲ್ಲಿ ಭಾನುವಾರ ಪೈವಳಿಕೆ ಅರಮನೆಯ ಅರಸು ಬಲ್ಲಾಳರಾದ ರಂಗತ್ರೈ ಬಲ್ಲಾಳರಸರು ಅಧ್ಯಕ್ಷತೆ ವಹಿಸಿದ್ದ ಕಂಬಳ ಕ್ರೀಡಾ ನೂತನ ಸಮಿತಿ ರೂಪೀಕರಣ ಸಭೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು ಅವರು ಕಂಬಳದ ನಿಯಮ ನಿಬಂಧನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಂಗತ್ರೈ ಅರಸರು ತಮ್ಮ ದೈವ ಕ್ಷೇತ್ರವಾದ ಬೋಳಂಗಳ ಕೇಂದ್ರೀಕರಿಸಿ ಕಂಬಳ ಉತ್ಸವವನ್ನು ಮುಂದಿನ ನವಂಬರ್ ತಿಂಗಳಲ್ಲಿ ನಡೆಸುವ ಬಗ್ಗೆ ಸೂಚಿಸಿ ” ಅಣ್ಣ-ತಮ್ಮ ದೈವ ಜೋಡುಕೆರೆ ಕಂಬಳ” ಎಂದು ನಾಮಕರಣ ನಿರ್ದೇಶನ ನೀಡಿದರು.
ತಂತ್ರಿವರ್ಯ ಉಮೇಶ್ ರಾಮಪ್ರಸಾದ ನಲ್ಲೂರಾಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಭಾರತ ಕಬ್ಬಡಿ ತಂಡದ ಮಾಜಿ ಉಪ ನಾಯಕ ಭಾಸ್ಕರ ರೈ ಮಂಜಲ್ತೋಡಿ, ಉದ್ಯಮಿ ಅಂದುಞಿ ಹಾಜಿ ಸಿರಂತ್ತಡ್ಕ, ಮುಖಂಡರಾದ ಕಾಡೂರು ಬೀಡು ಮಾರಪ್ಪ ಭಂಡಾರಿ, ಸುದರ್ಶನಪಾಣಿ ಬಲ್ಲಾಳ್, ನಾರಾಯಣ ಶೆಟ್ಟಿ ಕಳಾಯಿ, ಮೋನಪ್ಪ ಶೆಟ್ಟಿ ಕಟ್ಣಬೆಟ್ಟು, ಜಿಲ್ಲಾ ಕಂಬಳ ಸಮಿತಿ ಸದಸ್ಯ ತಿಮ್ಮಪ್ಪ ಅರಿಯಾಳ, ಜೋನ್ ಡಿಸೋಜ, ಕೇಶವ ಬಾಯಿಕಟ್ಟೆ, ಪ್ರಸಾದ ರೈ ಕಯ್ಯಾರು, ಹರೀಶ್ ಬೊಟ್ಟಾರಿ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಅಶ್ವತ್ ಪೂಜಾರಿ ಲಾಲ್ಬಾಗ್ ಉಪಸ್ಥಿತರಿದ್ದು ಮಾತನಾಡಿದರು.
ಸಭೆಯಲ್ಲಿ ನೂತನ ಅಣ್ಣ ತಮ್ಮ ದೈವ ಜೋಡುಕೆರೆ ಕಂಬಳ ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ಶಾಸಕ ಪಿ.ಬಿ.ಅಬ್ದುಲ್ ರಝಾಕ್ರನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಜಿತ್ ಎಂ.ಸಿ.ಲಾಲ್ಬಾಗ್, ಗೌರವ ಸಲಹೆಗಾರರಾಗಿ ರಂಗತ್ರೈ ಬಲ್ಲಾಳ ಅರಸರು, ಕಾಯರ್ಾಧ್ಯಕ್ಷರಾಗಿ ಬ್ಲಾ.ಪಂ. ಅಧ್ಯಕ್ಷ ಎಕೆಎಂ ಅಶ್ರಫ್, ಪ್ರಧಾನ ಕಾರ್ಯದರ್ಶಿ ಯಾಗಿ ಹರೀಶ್ ಶೆಟ್ಟಿ ಕಡಂಬಾರ್, ಕೋಶಾಧಿಕಾರಿಯಾಗಿ ಅಂಕಿತ ಶೆಟ್ಟಿ ಮತ್ತು ಪ್ರಧಾನ ಸಂಚಾಲಕರಾಗಿ ಅಶ್ವತ್ ಪೂಜಾರಿ ಲಾಲ್ಬಾಗ್ ಅವರನ್ನು ಆರಿಸಲಾಯಿತು. ಜೊತೆಗೆ ಸಂಘಟನಾ ಕಾರ್ಯದರ್ಶಿ ಯಾಗಿ ವಿಶ್ವನಾಥ ಗೌಡ, ಲೆಕ್ಕ ಪರಿಶೋಧಕರಾಗಿ ಗಿರೀಶ್ ಮಾಸ್ತರ್ ಚಿಪ್ಪಾರು ಸಹಿತ 120 ಮಂದಿ ಗಣ್ಯರನ್ನೊಳಗೊಂಡ ಸಮಿತಿಗೆ ರೂಪು ನೀಡಲಾಯಿತು. ಅಶ್ವತ್ ಪೂಜಾರಿ ಲಾಲ್ ಭಾಗ್ ಸ್ವಾಗತಿಸಿ, ಹರೀಶ್ ಶೆಟ್ಟಿ ಕಡಂಬಾರ್ ವಂದಿಸಿದರು. ವಿಶ್ವನಾಥ ಗೌಡ ಸಭೆ ನಿರ್ವಹಿಸಿದರು.
ಕಂಬಳ ಮರುಜೀವ:
ಪೈವಳಿಕೆ, ಚಿಪ್ಪಾರು, ಪೆರ್ವಡಿ ಮೊದಲಾದೆಡೆ ಶತಮಾನಗಳ ಹಿಂದೆ ಭತ್ತದ ಸಾಗುವಳಿ ಸಮೃದ್ದವಾದ ಕಾಲವೊಂದರಲ್ಲಿ ಸಾಕಷ್ಟು ಕಂಬಳ ಕ್ರೀಡೆಗಳು ನಡೆಯುತ್ತಿದ್ದ ಬಗ್ಗೆ ಹಿರಿಯ ನಾಗರಿಕರು ಇದೀಗಲೂ ನೆನಪಿಸುತ್ತಾರೆ. ಕಳಾಯಿ, ಪೈವಳಿಕೆ ಪರಿಸರದ ಗುತ್ತಿನ ಮನೆಗಳಲ್ಲಿ ಜೋಡು ಜೋಡು ಕೋಣಗಳು, ಹುರುಳಿ ಬೇಯಿಸುವ ಬೃಹತ್ ಗಡಾಯಿಗಳು ಇಂದು ನೆನಪುಗಳಾಗಿ ಮಾತ್ರ ಉಳಿದಿರುವಾಗ ಹೊಸ ತಲೆಮಾರಿಗೆ ಸಂಸ್ಕೃತಿಯ ಪಳೆಯುಳಿಕೆಗಳು ಮಾತ್ರ ಕಾಣಿಸುತ್ತಿದೆ. ಆದರೆ ಅಂತಹ ಸುಸಂಸ್ಕೃತ ಬದುಕಿನ ಪರಿಯಚಕ್ಕೆ ಇದೀಗ ಹುರುಪಿನಿಂದ ರೂಪುಗೊಂಡಿರುವ ಕಂಬಳ ಸಮಿತಿಯ ಚಟುವಟಿಕೆ ಭೀಮ ಯತ್ನವಾಗಿ ಕಾಣಿಸುವುದರಲ್ಲಿ ತಪ್ಪಿಲ್ಲ.
Click this button or press Ctrl+G to toggle between Kannada and English