ಮಂಗಳೂರು : ದೇವದಾಸ್ ಕಾಪಿಕಾಡ್ ರ ಬೊಳ್ಳಿ ಕ್ರಿಯೇಷನ್ ನ ಏರಾ ಉಲ್ಲೆರ್ಗೆ ಮತ್ತು ಲಕುಮಿ ಕ್ರಿಯೆಷನ್ಸ್ ನ ಮೈ ನೇಮ್ ಈಸ್ ಅಣ್ಣಪ್ಪ ಸೆಪ್ಟೆಂಬರ್ 21 ರಂದು ಮಂಗಳೂರು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಗೊಳ್ಳಲಿದೆ.
‘ಮೈ ನೇಮ್ ಈಸ್ ಅಣ್ಣಪ್ಪ’ ಚಿತ್ರವನ್ನು ಶ್ರೀದುರ್ಗಾ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸಿದೆ. ವಿಕ್ರಮ್ ರೈ ಛಾಯಾಗ್ರಹಣ, ಮಯೂರ್ ಆರ್.ಶೆಟ್ಟಿ ನಿರ್ದೇಶನ, ಹಾಡು, ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ, ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ ಹಾಗೂ ದಿನೇಶ್ ಅಮ್ಮಣ್ಣಾಯ ಹಾಡೂ ಇದೆ.
ಯಕ್ಷಗಾನ ಭಾಗವತರಿಂದ ಸಿನಿಮಾಕ್ಕೆ ಹಾಡಿಸುವ ಹೊಸ ಪ್ರಕ್ರಿಯೆ ಮೂಲಕ ಸಿನೆಮಾ ಹೊಸ ರೀತಿಯಲ್ಲಿ ಪ್ರೇಕ್ಷಕರಿಗೆ ಆಕರ್ಷಣೆ ಯಾಗಲಿದೆಯಂತೆ.
ಕಾಮಿಡಿ ಪಾತ್ರಗಳಲ್ಲಿ ನಟಿಸುತ್ತಿದ್ದ ಮಂಜು ರೈ ಮುಳೂರು ಮೊದಲ ಬಾರಿಗೆ ಈ ಸಿನೆಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಶುಭಾ ಎಂಬುವವರು ಈ ಸಿನೆಮಾದ ಹೀರೋಯಿನ್. ಇವರು ಕೆನಡಾದಲ್ಲಿ ನೆಲೆಸಿರುವ ಭಾರತೀಯ ನಿವಾಸಿ. ಹಾಗೆಯೇ ಸ್ಯಾಂಡಲ್ ವುಡ್ ನ ಹಿರಿಯ ಕಾಮಿಡಿ ನಟ ರಂಗಾಯಣ ರಘು ಈ ಸಿನೆಮಾದಲ್ಲಿ ನಟಿಸಿರುವುದು ವಿಶೇಷ.
ದೇವದಾಸ್ ಕಾಪಿಕಾಡ್ ಈಗ ತನ್ನದೇ ನಿರ್ದೇಶನದ ನಾಲ್ಕನೇ ಸಿನೆಮಾ ‘ಏರಾ ಉಲ್ಲೆರ್‌ಗೆ’ ಈ ಸಿನೆಮಾದಲ್ಲಿ ಕಾಪಿಕಾಡ್ ಶೇ.80ರಷ್ಟು ಭಾಗದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರಿಗೆ ಸಾಯಿಕೃಷ್ಣ ಜತೆಯಾಗಿದ್ದಾರೆ.
ಕಾಮಿಡಿ ಮೂಡ್‌ನಲ್ಲಿ ಸಿದ್ಧಗೊಂಡ ಈ ಸಿನೆಮಾ ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಸಿತ್ತು. ಅರ್ಜುನ್ ಕಾಪಿಕಾಡ್, ಅನೂಪ್ ಸಾಗರ್, ರಶ್ಮಿಕಾ ಚೆಂಗಪ್ಪ, ಆರಾಧ್ಯ ಶೆಟ್ಟಿ ಮುಖ್ಯಭೂಮಿಕೆಯ ಲ್ಲಿದ್ದಾರೆ.
ಸಾಕಷ್ಟು ಭೂಮಿ ಹೊಂದಿದ ಮಾಲೀಕ ಕರಾವಳಿಯ ಒಬ್ಬ ತನ್ನ ಪಟಲಾಂ ಜತೆಗೆ ಹೇಗೆ ವರ್ತನೆ ತೋರುತ್ತಾರೆ ಎಂಬ ರೀತಿಯಲ್ಲಿ ಕಾಪಿಕಾಡ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಭಾಗದಲ್ಲಿ ಕಾಪಿಕಾಡ್ ಅವರೇ ಕಾಣಿಸಿಕೊಂಡ ಕಾರಣದಿಂದ ಕೋಸ್ಟಲ್ ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿದೆ. ‘ಕರ್ಣೆ’ ಚಿತ್ರದ ಕೆಮರಾ ಕೆಲಸ ಮಾಡಿದ ಸುಧಾಕರ್ ಅವರೇ ಈ ಸಿನೆಮಾದಲ್ಲೂ ಕೈಚಳಕ ತೋರಿದ್ದಾರೆ. ಹಾರರ್ ಕಥೆ ಕೂಡ ಈ ಸಿನೆಮಾಕ್ಕೆ ಹೊಸ ಲುಕ್ ನೀಡಿದೆ.
ಸದ್ಯ ಕೋಸ್ಟಲ್ ವುಡ್ ನಲ್ಲಿ ಎರಡು ಸಿನಿಮಾಗಳ ಮಧ್ಯೇ ಶೀತಲ ಸಮರ ಆರಂಭವಾಗಿದೆ. ದೇವದಾಸ್ ಕಾಪಿಕಾಡ್ ರ ಏರಾ ಉಲ್ಲೆರ್ಗೆ ಮತ್ತು ಲಕುಮಿ ಕ್ರಿಯೆಷನ್ಸ್ ಸಿನಿಮಾಗಳ ಮಧ್ಯೆ ಬಿಡುಗಡೆ ವಾರ್ ತಾರಕಕ್ಕೇರಿದೆ. ವಾರದಲ್ಲಿ ಒಂದೇ ಸಿನಿಮಾಗೆ ಅವಕಾಶ ನೀಡಬೇಕು ಅನ್ನೋ ಒಪ್ಪಂದ ಕೊಂಡಿದ್ದರೂ . ಈ ವಾರ ಮಾತ್ರ ಎಲ್ಲಾ ರೂಲ್ಸ್ ಗಳನ್ನ ಬ್ರೇಕ್ ಮಾಡಿ ಎರಡು ಸಿನಿಮಾಗಳು ಬಿಡುಗಡೆ ಯಾಗಲಿದೆ.
ಕೋಸ್ಟಲ್‌ವುಡ್ ಇಂಡಸ್ಟ್ರಿ ಕ್ಷಿಪ್ರ ರೀತಿಯಲ್ಲಿ ಬೆಳೆಯುತ್ತಿರುವುದರಿಂದ ಸಾಲು ಸಾಲು ಚಿತ್ರಗಳು ರೆಡಿಯಾಗುತ್ತಿರುವುದು ಖುಷಿಯ ವಿಷಯ. ಆದರೆ ಒಂದು ಕಡೆ ಸೆನ್ಸಾರ್‌ಗಾಗಿ ಫೈಟ್ ಆಗುತ್ತಿದ್ದರೆ, ಇನ್ನೊಂದು ಕಡೆ ಚಿತ್ರ ಬಿಡುಗಡೆಗಾಗಿ ಪೈಪೋಟಿ . ತುಳು ಚಿತ್ರ ಬಿಡುಗಡೆ ಕ್ರಮಬದ್ಧ ಮಾಡುವ ಉದ್ದೇಶದಿಂದ ಇಲ್ಲಿಯೂ ನಿರ್ಮಾಪಕರ ಸ್ಕ್ರೀನಿಂಗ್ ಕಮಿಟಿಯೊಂದು ಅಸ್ತಿತ್ವದಲ್ಲಿದೆ. ಆದರೆ ಸ್ಕ್ರೀನಿಂಗ್ ಕಮಿಟಿಯ ಕೈಮೀರಿಯೂ ಸಿನಿಮಾ ಬಿಡುಗಡೆಯಾಗುವ ಹಂತಕ್ಕೆ ಕೋಸ್ಟಲ್‌ವುಡ್ ಬೆಳದಿದೆ. ಕೋಸ್ಟಲ್‌ವುಡ್‌ನಲ್ಲಿ ಒಂದೇ ದಿನ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ಚಿತ್ರಗಳನ್ನು ಗೆಲ್ಲಿಸುವ ತಾಕತ್ತು ಕರಾವಳಿಗರಿಗಿದೆಯೋ ಎಂಬುವುದು ಅನುಮಾನ. ಪರಿಣಾಮ ನಿರ್ಮಾಪಕ ಸೋಲುತ್ತಾರೆ. ಇದರಿಂದ ಇಂಡಸ್ಟ್ರೀ ಬೆಳೆಯುವುದಿಲ್ಲ. 2018ನೇ ಇಸವಿಯಲ್ಲಿ ಇಂತಹ ಟ್ರೆಂಡ್ ಶುರುವಾಗಿದೆ.
48 ವರ್ಷಗಳ ತುಳು ಸಿನಿಮಾ ರಂಗದಲ್ಲಿ ಪ್ರಪ್ರಥಮ ಬಾರಿಗೆ ಇಂತಹ ಪೈಪೋಟಿ 2018ರಲ್ಲಿ ಆರಂಭವಾಗಿದೆ. ಮಾರ್ಚ್ ತಿಂಗಳ 23ರಂದು ಒಂದೇ ದಿನ ಎರಡು ಚಿತ್ರಗಳಾದ ಅಪ್ಪೆ ಟೀಚರ್ ಮತ್ತು ತೊಟ್ಟಿಲು ಬಿಡುಗಡೆಗೊಂಡಿತ್ತು. ಕಿಶೋರ್ ಮೂಡುಬಿದಿರೆಯವರ ಅಪ್ಪೆ ಟೀಚರ್ ಶತದಿನ ಕಂಡರೆ, ತೊಟ್ಟಿಲು ಸಿನಿಮಾ ತೆರೆಗೆ ಬಂದು ಬೆರಳೆಣಿಕೆಯ ದಿನಗಳಲ್ಲಿ ತೆರೆಯಿಂದ ಮರೆಯಾಗಿತ್ತು. ಇದೀಗ ಮತ್ತೆ ಇಂತಹ ಸನ್ನಿವೇಶ ಕೋಸ್ಟಲ್‌ವುಡ್‌ಗೆ ಎದುರಾಗಿದೆ.
ಯಾವ ಚಿತ್ರ ಸೆನ್ಸಾರ್ ಮೊದಲಾಗುತ್ತದೆಯೋ ಆ ಚಿತ್ರ ಬಿಡುಗಡೆ ಮಾಡುವ ರೂಢಿಯನ್ನು ಕೋಸ್ಟಲ್‌ವುಡ್ ಅನುಸರಿಸುತ್ತಿದೆ. ಸೆನ್ಸಾರ್ ಸರ್ಟಿಫಿಕೆಟ್ ಕೈಬಂದ ತಕ್ಷಣ ಅದನ್ನು ಚಿತ್ರಮಂದಿರಗಳಿಗೆ ತಲುಪಿಸಿ ಬಿಡುಗಡೆ ದಿನಾಂಕ ನಿಗದಿಪಡಿಸಲಾಗುತ್ತಿದೆ. ಇಲ್ಲಿ ಉಭಯ ನಿರ್ದೇಶಕರಿಗೆ ಒಂದೇ ದಿನ ಸೆನ್ಸಾರ್ ಸರ್ಟಿಫಿಕೆಟ್ ಲಭಿಸಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದೆ ಎಂಬುವುದು ಕೋಸ್ಟಲ್‌ವುಡ್‌ನಿಂದ ಬಂದ ಸುದ್ದಿ.
ಈ ಕುರಿತು ಪ್ರತಿಕ್ರಿಯಿಸಿದ ಮೈ ನೇಮ್ ಈಸ್ ಅಣ್ಣಪ್ಪದ ಕಿಶೋರ್ ಡಿ ಶೆಟ್ಟಿ ಕೋಸ್ಟಲ್‌ವುಡ್‌ನೊಂದಿಗೆ ಮಾತನಾಡಿ, ಮೈ ನೇಮ್ ಈಸ್ ಅಣ್ಣಪ್ಪ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ನೀಡುವ ಸರ್ಟಿಫಿಕೆಟ್ ಮೊದಲು ನಮ್ಮ ಕೈ ಸೇರಿದೆ. ತಕ್ಷಣ ನಾವು ಮಂಗಳೂರಿನ ಜ್ಯೋತಿ ಥಿಯೇಟರ್ ಸೇರಿದಂತೆ ಎಲ್ಲಾ ಚಿತ್ರಮಂದಿರದ ಆಡಳಿತಕ್ಕೆ ಅದರ ಪ್ರತಿ ರವಾನಿಸಿ ಬಿಡುಗಡೆ ದಿನಾಂಕ ಸೆ.21 ಎಂದು ಪ್ರಕಟಿಸಿದ್ದೇವೆ. ಜ್ಯೋತಿ ಚಿತ್ರಮಂದಿರ ನಮಗೆ ಸಿಕ್ಕಿದರೆ ಚಿತ್ರ ಬಿಡುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಏರಾ ಉಲ್ಲೆರ್‌ಗೆ ಚಿತ್ರದ ದೇವದಾಸ್ ಕಾಪಿಕಾಡ್ ಕೋಸ್ಟಲ್‌ವುಡ್‌ನೊಂದಿಗೆ ಮಾತನಾಡಿ, ಸೆನ್ಸಾರ್ ಮಂಡಳಿ ನಮ್ಮ ಸಿನಿಮಾ ಮೊದಲು ವೀಕ್ಷಿಸಿದೆ. ಸೆನ್ಸಾರ್ ಮಂಡಳಿ ನೀಡುವ ಸರ್ಟಿಫಿಕೆಟ್‌ನ ಮೊದಲ ಸೀರಿಯಲ್ ನಂಬರ್ ನಮ್ಮದು. ಅದರ ಪ್ರಕಾರ ನಮಗೆ ಮೊದಲು ಬಿಡುಗಡೆಗೆ ಅವಕಾಶ ಇದೆ. ಇಲ್ಲಿ ಯಾವುದೇ ಗೊಂದಲ ಇಲ್ಲ . ಎಲ್ಲಾ ಚಿತ್ರಮಂದಿರಗಳಲ್ಲೂ ಸೆ.21ರಂದು ಚಿತ್ರ ಬಿಡುಗಡೆಗೆ ಪ್ರಯತ್ನಿಸುತ್ತಿದ್ದೇವೆ ಎಂದರು. ಏನೇ ಆದರೂ ತುಳು ಚಿತ್ರರಂಗದ 48 ವರ್ಷಗಳ ಇತಿಹಾಸದಲ್ಲಿ ಚಿತ್ರಗಳ ಬಿಡುಗಡೆಗಾಗಿ ಪೈಪೋಟಿ ನಡೆಯುತ್ತಿರುವುದು ಇದೇ ಮೊದಲು ಎನ್ನಬಹುದು.
Click this button or press Ctrl+G to toggle between Kannada and English