ಮಂಗಳೂರು : ಮಂಗಳೂರಿನ ಲಾಲ್ ಬಾಗ್ ಹಾಗು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಬಳಿಯ ಜನನಿಬಿಡ ಪ್ರದೇಶದಲ್ಲಿ ಸಮವಸ್ತ್ರ ಧರಿಸಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಮಧ್ಯಾಹ್ನ ಕಂಠಪೂರ್ತಿ ಕುಡಿದು ತೂರಾಡಿದ ಘಟನೆ ಮಂಗಳೂರಿನಲ್ಲಿ ಬುಧವಾರ (ಸೆ.19) ನಡೆದಿದೆ.
ಕುಡಿದ ಮತ್ತಿನಲ್ಲಿ ರಸ್ತೆಯಲ್ಲೆಲ್ಲಾ ತೂರಾಡಿದ ಪೊಲೀಸ್ ಸಿಬ್ಬಂದಿ ಯನ್ನು ಅಶೋಕ್ ಗೌಡ ಎಂದು ಗುರುತಿಸಲಾಗಿದೆ. ಇವರು ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾರೆ.
ಅಶೋಕ್ ಗೌಡ ಯೂನಿಫಾರ್ಮ್ ನಲ್ಲಿದ್ದುಕೊಂಡೇ ಕುಡಿದು ತೂರಾಡಿದ್ದಲ್ಲದೆ ರಸ್ತೆ ಮಧ್ಯೆ ವಾಹನಗಳನ್ನು ತಳ್ಳಿಕೊಂಡು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಇವರೇ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದರು ಎಂದು ಹೇಳಲಾಗಿದೆ.
ಕುಡಿದು ಫುಲ್ ಟೈಟ್ ಆಗಿದ್ದ ಪೊಲೀಸ್ ಸಿಬ್ಬಂದಿ ಅಶೋಕ್ ಗೌಡ ನನ್ನು ಸಾರ್ಜನಿಕರೇ ಎಳೆದು ತಂದು ರಕ್ಷಿಸಿದ್ದಾರೆ. ಸಮವಸ್ತ್ರದಲ್ಲಿ ಕುಡಿದು ತೂರಾಡಿದ ಪೊಲೀಸ್ ಸಿಬ್ಬಂದಿ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರೆಲ್ಲಾ ಸೇರಿ ಪೊಲೀಸ್ ಪೇದೆಯನ್ನು ಹಿಡಿದು ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಕುಳ್ಳಿರಿಸಿ ಕುಡಿಯಲು ನೀರನ್ನೂ ಕೂಡ ಕೊಟ್ಟಿದ್ದಾರೆ. ರಾತ್ರಿ ಹೊತ್ತು ಕುಡಿದು ವಾಹನ ಚಲಾಯಿಸುವವರನ್ನು ಹಿಡಿದು ದಂಡ ಹಾಕುವ ಟ್ರಾಫಿಕ್ ಪೊಲೀಸರೇ ಮಧ್ಯಾಹ್ನ ಕುಡಿದು ತೂರಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
Click this button or press Ctrl+G to toggle between Kannada and English