ಬೆಂಗಳೂರು: ಇಂದು ಬೆಳಿಗ್ಗೆ ಬೆಂಗಳೂರಿನಿಂದ ದಿಲ್ಲಿಗೆ ತೆರಳಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಪಕ್ಷದ ಹೈಕಮಾಂಡ್ ನಾಯಕರ ಜತೆ ಮಾತುಕತೆ ನಡೆಸುವ ಸಲುವಾಗಿ ಸತೀಶ್ ಇಂದು ದೆಹಲಿಗೆ ತೆರಳಿದ್ದಾರೆ. ತಮ್ಮ ವೈಯಕ್ತಿಕ ಬೇಡಿಕೆಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಇಂದು ದಿಲ್ಲಿಗೆ ತೆರಳಿದ್ದು ಪಕ್ಷದ ವರಿಷ್ಠರ ಜೊತೆ ಸಮಾಲೋಚಿಸಲಿದ್ದಾರೆ. ವರಿಷ್ಠರ ಭೇಟಿಗೆ ತೆರಳುವ ಮುನ್ನ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಗೊಂದಲ, ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೇಮಕ ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಲು ರಾಜ್ಯ ನಾಯಕರು ದಿಲ್ಲಿಗೆ ತೆರಳಿದ್ದು, ನಿನ್ನೆ ರಾತ್ರಿ ರಾಹುಲ್ ಗಾಂಧಿ ಜೊತೆ ಸಮಾಲೋಚಿಸಿದ್ದಾರೆ.
ಸಿದ್ದರಾಮಯ್ಯ ಭೇಟಿ ನಂತರ ವೇಣುಗೋಪಾಲ್ ಭೇಟಿಗೆ ತೆರಳಿದ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಮ್ಮ ಪಕ್ಷದ ಯಾವೊಬ್ಬ ಶಾಸಕರು ಬಿಜೆಪಿಗೆ ಸೇರ್ಪಡೆ ಆಗಲ್ಲ. ನಮ್ಮಲ್ಲಿ ಯಾರೂ ಮಹಾರಾಷ್ಟ್ರಕ್ಕೆ ಹೋಗುತ್ತಿಲ್ಲ, ಇದೆಲ್ಲಾ ಕೇವಲ ವದಂತಿ. ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮಾರ್ಗದರ್ಶನದಂತೆ ನಾವು ಮುಂದುವರಿಯುತ್ತೇವೆ. ಲೋಕಸಭೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಸಂಬಂಧ ನಾವು ಇಂದು ಸಮಾಲೋಚನೆ ನಡೆಸುತ್ತಿದ್ದೇವೆ. ಪಕ್ಷವನ್ನು ಬಲಿಷ್ಠಗೊಳಿಸುವುದು ನಮ್ಮ ಮುಂದಿರುವ ಗುರಿ ಎಂದು ವಿವರಿಸಿದರು.
ರಾಹುಲ್ ಗಾಂಧಿ ಭೇಟಿ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ ಎಂದು ತಿಳಿಸಿರುವ ಸತೀಶ್ ಜಾರಕಿಹೊಳಿ, ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ವರಿಷ್ಠರೇ ಮಾತುಕತೆ ನಡೆಸುತ್ತಾರೆ. ನಾನು ಈ ವಿಚಾರದಲ್ಲಿ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ವಿವರಿಸಿದರು.
ಡಿಕೆಶಿ ಅವರ ವಿಚಾರ ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸುವುದಿಲ್ಲ. ಅದು ಈಗಾಗಲೇ ಮುಗಿದಿರುವ ಅಧ್ಯಾಯ ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
Click this button or press Ctrl+G to toggle between Kannada and English