ಮಂಗಳೂರಿನಲ್ಲಿ 23ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಉದ್ಘಾಟನೆ

2:24 PM, Wednesday, January 11th, 2012
Share
1 Star2 Stars3 Stars4 Stars5 Stars
(8 rating, 6 votes)
Loading...

Road safty

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಸಂತ ಅಲೋಶಿಯಸ್‌ ಪ.ಪೂ. ಕಾಲೇಜು ಆವರಣದಲ್ಲಿ ಆರಂಭವಾದ 23ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು

ರಸ್ತೆ ಸುರಕ್ಷಾ ಸಪ್ತಾಹವನ್ನು ಆಚರಿಸಿದರೆ ಮಾತ್ರ ಸಾಲದು ಅವುಗಳ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಕೂಡಾ ನಿಯಮ ಅನುಸರಣೆ ಮಾಡುವ ಮೂಲಕ ಸುಗಮ, ಸುರಕ್ಷಿತ ಸಂಚಾರಕ್ಕೆ ನೆರವಾಗ ಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಚತುಷ್ಪಥ ರಸ್ತೆಯಲ್ಲಿ ಸಂಚರಿಸುವ ವಾಹನಳ ಚಾಲಕರು ನಿರ್ದಿಷ್ಟ ಪಥದಲ್ಲಿ ಸಂಚರಿಸಿದರೆ ನಿಯಮಾನುಸಾರ ವಾಹನ ಚಲಾಯಿಸುವ ಚಾಲಕರಿಗೆ ಸಮಸ್ಯೆಯಾಗದು. ಈಗ ಎಲ್ಲೆಂದರಲ್ಲಿ ಸಂಚರಿಸುತ್ತಿದ್ದಾರೆ ಎಂದರು. ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಸಂಬಂಧಿಸಿ ಸೂಚನಾ ಫಲಕಗಳಿದ್ದವು. ತಿರುವು ಮತ್ತು ಅಪಾಯದ ತಾಣಗಳ ಮಾಹಿತಿ ಸಿಗುತ್ತಿತ್ತು. ಈಗ ಅವು ಕಣ್ಮರೆಯಾಗಿವೆ ಎಂದು ಅವರು ಹೇಳಿದರು.

ಸರಕಾರಿ ಬಸ್ಸುಗಳಿಗೆ ವೇಗ ನಿಯಂತ್ರಕ ಅಳವಡಿಸಿದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಅವರು, ಇಂತಹ ನಿಯಂತ್ರಣದ ಬದಲು ಸಂಚಾರ ನಿಯಮಗಳ ಅನುಸರಣೆ ಸಮರ್ಪಕವಾಗಿ ಆಗಬೇಕು. ಈ ಮೂಲಕ ಅಪಘಾತಗಳನ್ನು ನಿಯಂತ್ರಿಸಬಹುದು ಎಂದರು.

ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ, ಡಿಸಿಪಿ ಡಿ. ಧರ್ಮಯ್ಯ, ಕರ್ನಾಟಕ ರಾಜ್ಯ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ| ವಿಲಿಯಂ ಮಿನೇಜಸ್‌, ಸಂತ ಎಲೋಶಿಯಸ್‌ ಪ.ಪೂ. ಕಾಲೇಜಿನ ಸಂಚಾಲಕ ಫಾ| ಎಲ್ವಿಸ್‌ ಲೂವಿಸ್‌, ಪ್ರಾಂಶುಪಾಲ ಪ್ರೊ| ಜಾನ್‌ ಎಡ್ವರ್ಡ್‌ ಡಿ’ಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.

ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಕೇಶವ ಧರಣಿ ಅವರ ‘ರಸ್ತೆ ಸುರಕ್ಷತೆ: ಸಮಸ್ಯೆಗಳು ಮತ್ತು ಪರಿಹಾರಗಳು’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ನೆಹರು ಮೈದಾನದಿಂದ ಸಂತ ಅಲೋಸಿಯಸ್‌ ಕಾಲೇಜು ವರೆಗೆ ಶಾಲಾ, ಕಾಲೇಜು ಮಕ್ಕಳ ಮೆರವಣಿಗೆ ಮತ್ತು ವಿಂಟೇಜ್‌ ಕಾರುಗಳ ರಾಲಿ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English