ಮೂಡುಬಿದಿರೆ: ಪ್ರತಿಯೊಬ್ಬರು ತಮ್ಮ ಚಿಂತನೆಗಳಿಗೆ ಒಂದು ಚೌಕಟ್ಟನ್ನು ಹಾಕಿಕೊಂಡು, ಅದರೊಳಗೆ ಬಂಧಿಯಾಗಿರುತ್ತಾರೆ. ಆ ಚೌಕಟ್ಟಿನಿಂದ ಹೊರಬಂದು ವಿಭಿನ್ನವಾಗಿ ಚಿಂತಿಸಿದಾಗ ಮಾತ್ರ ವ್ಯಕ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಡಾ. ಶ್ರೀನಿವಾಸ್ ನಂದಗೋಪಾಲ್ ಹೇಳಿದರು.
ಇವರು ಆಳ್ವಾಸ್ ಕಾಲೇಜಿನಲ್ಲಿ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ನಡೆದ “ವ್ಯಕ್ತಿತ್ವ ವಿಕಸನ”ದ ಒಂದು ದಿನದ ತರಬೇತಿ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಸಮಸ್ಯೆಗಳಿಗೆ ಭ್ರಷ್ಟಚಾರವಾಗಲೀ, ಅನಕ್ಷರತೆಯಾಗಲಿ ಮುಖ್ಯ ಕಾರಣವಲ್ಲ. ಬದಲಾಗಿ ನಮ್ಮಲ್ಲಿರುವ ಕುಂಠಿತ ಚಿಂತನೆಗಳೆ ನಮ್ಮನ್ನು ಅಭಿವೃದ್ಧಿಯಿಂದ ವಿಮುಖರಾಗುವಂತೆ ಮಾಡುತ್ತವೆ. ಅದನ್ನು ನಾವು ಬದಲಾಯಿಸಿಕೊಳ್ಳಬೇಕು. ಆಗ ನಾವು ಬದಲಾಗಿ, ವ್ಯವಸ್ಥೆಯು ಉನ್ನತಿಯತ್ತ ಸಾಗುತ್ತದೆ.
ಯಾವುದೇ ವಿಷಯವನ್ನು ಕಲಿಯುವಾಗ ಆಸಕ್ತಿ, ಉತ್ಸಾಹದಿಂದ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆ ಪ್ರಕ್ರಿಯೆಯು ವ್ಯಾಸಂಗವಾಗುತ್ತದೆ ಹೊರತು ಕಲಿಕೆಯಾಗುವುದಿಲ್ಲ.
ಕಲಿಕೆಯು ಯಾವಾಗಲೂ ಶಾಶ್ವತವಾಗಿರುವಂತದ್ದು. ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಕಲಿಕೆಯು ಸಹಾಯ ಮಾಡುವುದಲ್ಲದೇ ನಮ್ಮಲ್ಲಿರುವ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುತ್ತದೆ. ನಾಳಿನ ದಿನದ ಕುರಿತು ಯಾರಿಗೂ ತಿಳಿದಿಲ್ಲ ಆದ್ದರಿಂದ ನಮ್ಮ ಪ್ರತಿಯೊಂದು ಕಾರ್ಯಗಳನ್ನು ಪೂರ್ಣ ಮನಸ್ಸಿನಿಂದ ಇಂದೇ ಮಾಡಬೇಕು. ಜೀವನದಲ್ಲಿ ಒಳ್ಳೆಯದಾಗಲಿ, ಕೆಟ್ಟದಾಗಲಿ ಪ್ರತಿಯೊಂದನ್ನು ಎದುರಿಸಿ, ಸೋಲಲ್ಲೂ ಗೆಲುವನ್ನು ಕಾಣುವ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬಿ.ಬಿ.ಎ ವಿಭಾಗದ ಡೀನ್ ಸುರೇಖಾ ಮಾತನಾಡಿ ’ಅತಿಯಾದ ತಂತ್ರಜ್ಞಾನವು ಯುವಜನಾಂಗದ ಚಿಂತನೆಗಳಿಗೆ ಅಡ್ಡಿಯಾಗಿದ್ದು, ಅವುಗಳಿಂದ ತಮ್ಮ ಮನಸ್ಸನ್ನು ಮುಕ್ತವಾಗಿಟ್ಟುಕೊಂಡು ಕ್ರೀಯಾಶೀಲರಾಗಿರಬೇಕು. ಜೀವನದಲ್ಲಿ ಅಂಕ ಪಡೆಯುವುದೊಂದೇ ಸಾಧನೆಯಲ್ಲ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು ಎಂದು ಹೇಳಿದರು.
ಕಾರ‍್ಯಕ್ರಮವನ್ನು ಅಂಕಿತ್ ಸ್ವಾಗತಿಸಿ, ರಕ್ಷಿತಾ ಪೂಜಾರಿ ನಿರೂಪಿಸಿ, ಅಂಕಿತಾ ವಂದಿಸಿದರು. ಕಾರ‍್ಯಕ್ರಮದಲ್ಲಿ ಉಪನ್ಯಾಸಕಿ ಅಶ್ವಿನಿ ಹಾಗೂ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English