ಮಂಗಳೂರು ದಸರಾ ಉದ್ಘಾಟಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ

9:58 PM, Friday, October 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kudroli dasaraಮಂಗಳೂರು :  ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.10 ರಂದು ನವರಾತ್ರಿ ಮಹೋತ್ಸವ ಆರಂಭಗೊಳ್ಳಲಿದ್ದು, ನವದುರ್ಗೆಯರ ಹಾಗೂ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಬೆಳಗ್ಗೆ 11.50ಕ್ಕೆ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕ್ಷೇತ್ರದ ನವೀಕರಣ ರುವಾರಿ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಶುಕ್ರವಾರ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅ.14ರಂದು ಸಾಯಂಕಾಲ 6 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಗಳೂರು ದಸರಾ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಲ್ಲವ ಮಹಾಮಂಡಳ ಅಧ್ಯಕ್ಷ ಜಯ ಸಿ.ಸುವರ್ಣ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಪರಿಷತ್ ಸದಸ್ಯರಾದ ಬೋಜೇಗೌಡ, ಹರೀಶ್ ಕುಮಾರ್, ಮೇಯರ್ ಭಾಸ್ಕರ ಕೆ., ಮಾಜಿ ಶಾಸಕ ಜೆ.ಆರ್.ಲೋಬೊ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಅ.20ರ ವರೆಗೆ ನವರಾತ್ರಿ ಮಹೋತ್ಸವ ನಡೆಯಲಿದ್ದು, 19ರಂದು ಶುಕ್ರವಾರ ಸಾಯಂಕಾಲ 4ರಿಂದ ಶಾರದಾಮಾತೆ ಹಾಗೂ ನವ ದುರ್ಗೆಯರ ಶೋಭಾಯಾತ್ರೆ ನಗರದಲ್ಲಿ ನಡೆದು ಶನಿವಾರ ಬೆಳಗ್ಗೆ ವಿಸರ್ಜನೆ ನಡೆಯಲಿದೆ. ದೇವಳದ ಅಭಿವೃದ್ಧಿ ಸಮಿತಿ ಸದಸ್ಯ ಎಂ.ವೇದ ಕುಮಾರ್ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ 75ಕ್ಕೂ ಅಧಿಕ ಸ್ತಬ್ಧಚಿತ್ರಗಳು, ರಾಜ್ಯದ ಎಲ್ಲ ಜಿಲ್ಲೆಗಳ ಕಲಾತಂಡಗಳು ಭಾಗವಹಿಸಲಿವೆ.

kudroli dasaraಅ.18ರಂದು ಮಧ್ಯಾಹ್ನ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಪ್ರತಿದಿನ ಸಾಯಂಕಾಲ 6ರಿಂದ ದಸರಾ ನವಸಿರಿ ಕಲಾ ಸಂಭ್ರಮ-2018 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಈಗಾಗಲೇ ದೇವಳಕ್ಕೆ ಬಣ್ಣ ಬಳಿಯುವುದು, ವಿದ್ಯುತ್ ದೀಪಾಲಂಕಾರ, ದಸರಾ ಮೆರವಣಿಗೆ ಸಾಗುವ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ನಡೆಸಲಾಗುತ್ತಿದೆ ಎಂದು ಪೂಜಾರಿ ಶುಕ್ರವಾರ ವಿವರಿಸಿದರು.

ದಸರಾ ಉತ್ಸವಕ್ಕೆ ಆಗಮಿಸುವ ಗಣ್ಯರ ಅತಿಥಿ ಹೆಸರು ಉಲ್ಲೇಖಿಸುವ ಸಂದರ್ಭದಲ್ಲಿ ಮಾಜಿ ಶಾಸಕ ಜೆ ಆರ್ ಲೋಬೋ ಅವರ ಹೆಸರನ್ನು ಪದ್ಮರಾಜ್ ಉಲ್ಲೇಖಿಸದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಅಂತ ಕರೆಸಿಕೊಂಡ ತಕ್ಷಣ ಅವರು ಮೂಲೆಗುಂಪು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅಧಿಕಾರದಲ್ಲಿದ್ದಾಗ ಅವರಿಗೆ ಸಿಗುವ ಗೌರವ ಅಧಿಕಾರ ಹೋದ ಮೇಲೆ ಸಿಗೋದೇ ಇಲ್ಲ. ಆದರೆ ಜೆಆರ್ ಲೋಬೋ ಅವರಿಗೆ ನೀಡುವ ಗೌರವ ನೀಡಲೇಬೇಕು ಎಂದು ಕಿವಿಮಾತು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕ್ಷೇತ್ರಾಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್ ( ಅಡ್ವಕೇಟ್), ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್., ಟ್ರಸ್ಟಿ ರವಿಶಂಕರ್ ಮಿಜಾರ್, ಕ್ಷೇತ್ರಾಭಿವೃದ್ಧಿ ಸಮಿತಿ ಸಹ ಅಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ದೇವೇಂದ್ರ ಪೂಜಾರಿ, ಪಿ.ಕೆ.ಲೋಹಿತ್ ಪೂಜಾರಿ, ಡಾ.ಬಿ.ಜಿ.ಸುವರ್ಣ, ಎಂ.ಶೇಖರ್ ಪೂಜಾರಿ, ಕೆ.ಚಿತ್ತರಂಜನ್ ಗರೋಡಿ, ಡಿ.ಡಿ.ಕಟ್ಟೆಮಾರ್, ಡಾ.ಅನುಸೂಯ ಬಿ.ಟಿ.ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

 

 

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English