ಮಂಗಳೂರು : ನೆಹರೂ ಮೈದಾನದಲ್ಲಿ ದ.ಕ ಜಿಲ್ಲಾಡಳಿತದ ವತಿಯಿಂದ ನಡೆದ 63ನೇ ಗಣರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ನೆವೇರಿಸಿದರು.
ಧ್ವಜ ವಂದನೆ ಸ್ವೀಕರಿಸಿದ ಬಳಿಕ ಸಿಎಆರ್, ಡಿಎಆರ್, ಸಿವಿಲ್, ಸಂಚಾರಿ ಪೊಲೀಸ್, ಗೃಹರಕ್ಷಕ ದಳ, ಆಗ್ನಿಶಾಮಕ ದಳ, ಎನ್‌ಸಿಸಿ ಆರ್ಮಿ, ನೇವಲ್, ಏರ್‌ಪೋರ್ಸ್ ಕಿರಿಯ ಮತ್ತು ಹಿರಿಯ, ಭಾರತ ಸೇವಾದಲ ಬಾಲಕರು ಹಾಗೂ ಬಾಲಕಿಯರ ತಂಡ, ರೋಡ್ ಸೇಫ್ಟಿ ಪೆಟ್ರೋಲ್ ಬಾಲಕರು ಮತ್ತು ಬಾಲಕಿಯರ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್, ತಂಡ ಪೊಲೀಸ್ ವಾದ್ಯತಂಡದೊಂದಿಗೆ ಆಕರ್ಷಕ ಪಥ ಸಂಚಲನ ವೀಕ್ಷಿಸಿದರು.
63ನೇ ಗಣರಾಜ್ಯೋತ್ಸವ ಸಂದೇಶ ನೀಡಿದ ಸಚಿವರು ಬಿಜೆಪಿ ಆಡಳಿತದ ಮೂರುವರೆ ವರ್ಷದ ಸಾಧನೆಗಳನ್ನು ಜನತೆಗೆ ವಿವರಿಸಿದರು.
ನಬಾರ್ಡ್ ಯೋಜನೆಯಡಿ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ 95.45 ಕೋ.ರೂ. ವಿನಿಯೋಗಿಸಲಾಗುತಿದ್ದು ಅದರಲ್ಲಿ 138 ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ 85 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
528 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 775 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳಿವೆ. 2011-12ನೇ ಸಾಲಿನ ಆಯವ್ಯಯದಲ್ಲಿ 72.50 ಕೋ.ರೂ. ಅಂದಾಜು ವೆಚ್ಚದಲ್ಲಿ 323 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸುವ ಗುರಿ ಇರಿಸಿಕೊಳ್ಳಲಾಗಿದೆ. ವಿಶೇಷ ಘಟಕ, ಗಿರಿಜನ ಉಪಯೋಜನೆ ಹಾಗೂ ಸಿಆರ್‌ಎಫ್ ಯೋಜನೆಯಡಿ 107 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಡಿಯಲ್ಲಿ ಒಟ್ಟು 29.11 ಕೋ.ರೂ. ವೆಚ್ಚದಲ್ಲಿ 81 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಇಂದಿರಾ ಆವಾಸ್ ಯೋಜನೆಯಡಿ 2011-12ನೇ ಸಾಲಿಗೆ 2,233 ಮನೆಗಳ ಭೌತಿಕ ಗುರಿ ಹಾಗೂ 11.16 ಕೋ.ರೂ. ಆರ್ಥಿಕ ಗುರಿ ನಿಗದಿ ಮಾಡಲಾಗಿದೆ. ಇದುವರೆಗೆ 2011 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಈ ಪೈಕಿ 28 ಮನೆಗಳು ಪೂರ್ಣಗೊಂಡಿದ್ದು ಉಳಿದವುಗಳು ಪ್ರಗತಿ ಹಂತದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಕೃಷಿ ಪಂಡಿತ ವಿಜೇತರಾದ ಜಾನ್ ವೇಗಸ್ ಚೇಳೂರು, ಪಿ. ಶಂಕರ್ ಭಟ್ ವಿಟ್ಲ, ಹಾಗೂ ಜಿಲ್ಲಾ ಮಟ್ಟದ ಕೃಷಿಪ್ರಶಸ್ತಿ ವಿಜೇತರಾದ ಆನಂದ ಶೆಟ್ಟಿ ಬಾಳ್ತಿಲ, ಶಂಕರ ಪ್ರಭು ಸೋಣಂದೂರು, ಕಮಲಾ ರೈ ಸುಳ್ಯ, ತಾಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಎಲಿಯಾಸ್ ಡಿ’ಸೋಜಾ ಪಂಜಿಮೊಗರು, ಡಿ. ಅಬೂಬಕ್ಕರ್ ಬೆಳ್ಮ, ರಮೇಶ್ ಎನ್. ರಾವ್ ತಾಳಿಪಾಡಿ, ಸುಂದರಿ ಶೆಡ್ತಿ ಶೀಮಂತೂರು ಅವರನ್ನು ಸಚಿವರು ಸಮ್ಮಾನಿಸಿದರು.
ಕಮಲಾ ರೈ ಪರವಾಗಿ ಪುತ್ರ ರಾಧಾಕೃಷ್ಣ ರೈ, ಡಿ. ಅಬೂಬಕ್ಕರ್ ಪರವಾಗಿ ಪುತ್ರ ಹಸನ್ ಹಾಗೂ ಸುಂದರಿ ಶೆಡ್ತಿ ಪರವಾಗಿ ಹರೀಶ್ ಶೆಟ್ಟಿ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು. ಪವರ್‌ಲಿಫ್ಟಿಂಗ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಸುಪ್ರೀತ ಅವರನ್ನು ಸಚಿವರು ಗೌರವಿಸಿದರು.
ಸೈಂಟ್ ಜೆರೋಸಾ ಪ್ರೌಢಶಾಲೆ ಹಾಗೂ ಸೈಂಟ್ ಆನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಮಂಗಳೂರು ಮೋಟಾರ್ ನ್ಪೋರ್ಟ್ಸ್ ಆಸೋಸಿಯೇಶನ್ ಆಶ್ರಯದಲ್ಲಿ ವಿಂಟೇಜ್ ಕಾರು ಜರಗಿತು.
ವಿಧಾನ ಸಭಾ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್, ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕ ಯು.ಟಿ. ಖಾದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,, ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ಮೇಯರ್ ಪ್ರವೀಣ್, ಉಪಮೇಯರ್ ಗೀತಾ ನಾಯಕ್, ಜಿಲ್ಲಾಧಿಕಾರಿ ಡಾ| ಎನ್.ಎಸ್. ಚನ್ನಪ್ಪ ಗೌಡ, ಜಿ.ಪಂ. ಸಿಇಒ ಡಾ| ಕೆ.ಎನ್. ವಿಜಯ ಪ್ರಕಾಶ್, ಮನಪಾ ಆಯುಕ್ತ ಡಾ| ಹರೀಶ್ ಕುಮಾರ್, ಐಜಿಪಿ ಪ್ರತಾಪ್ ರೆಡ್ಡಿ, ಎಸ್‌ಪಿ ಅಭಿಷೇಕ್ ಗೋಯಲ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೂಡಾ ಅಧ್ಯಕ್ಷ ಎಸ್. ರಮೇಶ್, ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ನಿದರ್ಶ್ ಹೆಗ್ಡೆ, ಕಸಾಪ ಅಧ್ಯಕ್ಷ ಪ್ರದೀಪ್ ಕಲ್ಕೂರ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English