ತುಮಕೂರು: ತಾಲೂಕಿನ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಹೂಡಿದ್ದ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದಿದೆ.
ಘಟಕ ವಿರೋಧಿಸಿ 116 ರೈತರ ಮೇಲೆ 307 ಪ್ರಕರಣ ದಾಖಲಿಸಲಾಗಿತ್ತು. ಎಲ್ಲಾ ಮೊಕದ್ದಮೆಗಳನ್ನು ಸರ್ಕಾರ ಯಾವುದೇ ಷರತ್ತಿಲ್ಲದೆ ವಾಪಸ್ ತೆಗೆದುಕೊಂಡಿದೆ. ತುಮಕೂರು ಮಹಾನಗರ ಪಾಲಿಕೆ ವತಿಯಿಂದ 2000 ರಿಂದಲೂ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ತೆರೆಯಲು ರೈತರಿಗೆ ಯಾವುದೇ ರೀತಿ ಸೂಚನೆ ನೀಡದೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಘಟಕ ಆರಂಭಿಸಬಾರದು ಎಂದು ಸುತ್ತಮುತ್ತಲ ಗ್ರಾಮದ ರೈತರು ವಿರೋಧ ವ್ಯಕ್ತಪಡಿಸಿದ್ದರು.
2015ರ ಡಿಸೆಂಬರ್ 20ರಂದು ಕಟ್ಟಿಗೇನಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಅನೇಕ ಪ್ರಕರಣವನ್ನು ರೈತರ ಮೇಲೆ ದಾಖಲು ಮಾಡಲಾಗಿತ್ತು. ರೈತರು ಕಸವಿಲೇವಾರಿ ವಾಹನಗಳನ್ನ ತಡೆದು ಪ್ರತಿಭಟಿಸಿದ್ದರು. ಸ್ಥಳಕ್ಕೆ ತೆರಳಿದ್ದ ಪೋಲಿಸ್ ಮೀಸಲು ಪಡೆ ವ್ಯಾನ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.
ರೈತರ ಮೇಲಿನ ಎಲ್ಲಾ ಮೊಕದ್ದಮೆ ವಾಪಸ್ ಪಡೆಯುವಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದರು. ಇದೀಗ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ.
ಸರ್ಕಾರದ ಈ ನಡೆಯಿಂದ ಮುಂದಿನ ದಿನಗಳಲ್ಲಿ ನಮಗೆ ಶಾಂತಿಯುತವಾಗಿ ಹೋರಾಟ ನಡೆಸಲು ಸಹಕಾರಿಯಾಗಿದೆ. ಅಲ್ಲದೆ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರ ಮಾಡುವುದಾಗಿ ಉಪಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
Click this button or press Ctrl+G to toggle between Kannada and English