ನವದೆಹಲಿ: ಗುರುವಾರದಂದು ಭಾರಿ ತಲ್ಲಣ ಮೂಡಿಸಿದ್ದ ಭಾರತೀಯ ಷೇರು ಮಾರುಕಟ್ಟೆ, ಶುಕ್ರವಾರ ಹೂಡಿಕೆದಾರರಿಗೆ ಶುಭದಾಯಕವಾಗಿ ಆರಂಭಗೊಂಡಿದೆ.
ದಿನದ ಆರಂಭದಲ್ಲೇ ಸೆನ್ಸೆಕ್ಸ್ 650ಕ್ಕೂ ಹೆಚ್ಚು ಅಂಕ ಜಿಗಿತ ಕಂಡಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜೊತೆಯಲ್ಲಿ ನಿಫ್ಟಿ ಸಹ ಕೊಂಚ ಚೇತರಿಕೆಯನ್ನು ಪಡೆದು, 10,350ರ ಅಸುಪಾಸಿನಲ್ಲಿ ಆರಂಭ ಪಡೆದಿದೆ.
ಕಳೆದ ಕೆಲ ದಿನಗಳಲ್ಲಿ ಕೆಟ್ಟ ಪರಿಸ್ಥಿತಿ ಅನುಭವಿಸುತ್ತಿದ್ದ ಅದಾನಿ ಪೋರ್ಟ್, ವೇದಾಂತ, ಇಂಡಸ್ಸಿಂಡ್ ಬ್ಯಾಮಕ್, ರಿಲಯನ್ಸ್,ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಏಷ್ಯನ್ ಪೈಂಟ್ಸ್, ಹೀರೋ ಮೋಟೋ ಕಾರ್ಪ್ಗಳು ಚೇತರಿಕೆಯ ಹಾದಿ ಹಿಡಿದಿವೆ.
ಜಾಗತಿಕ ಷೇರು ಮಾರುಕಟ್ಟೆಯ ವಹಿವಾಟುಗಳು ಭಾರತದ ಮೇಲೂ ಪರಿಣಾಮ ಬೀರಿದ್ದರಿಂದ ಗುರವಾರದಂದು ಕೇವಲ ಐದು ನಿಮಿಷದಲ್ಲಿ ಹೂಡಿಕೆದಾರರು ನಾಲ್ಕು ಲಕ್ಷ ಕೋಟಿ ಕಳೆದುಕೊಂಡು ಕಂಗಾಲಾಗಿದ್ದರು. ಆದರೆ ಇಂದಿನ ವಹಿವಾಟು ಸ್ವಲ್ಪಮಟ್ಟಿನ ಸಮಾಧಾನ ಮೂಡಿಸಿದೆ.
ಕಳೆದ ಒಂದು ವರ್ಷದ ಅವಧಿಯಲ್ಲೇ ಅತಿ ಹೆಚ್ಚು ಎಂಬಂತೆ ನ್ಯೂಯಾರ್ಕ್ ಷೇರುಪೇಟೆ ಕುಸಿದ ಹಿನ್ನೆಲೆಯಲ್ಲಿ ನಿನ್ನೆ ಜಾಗತಿಕ ಷೇರುಪೇಟೆಯಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಅಮೆರಿಕನ್ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡಿದ್ದರಿಂದ ಬಾಂಡ್ ಹೊಂದಿದವರು ಅವುಗಳನ್ನ ಮಾರಿ ಲಾಭಗಳಿಕೆಯಲ್ಲಿ ತೊಡಗಿದ್ದರಿಂದ ಅಮೆರಿಕನ್ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗುವಂತೆ ಮಾಡಿತ್ತು.
ಸತತ ಬಡ್ಡಿ ದರ ಏರಿಕೆ ಅಮೆರಿಕವನ್ನ ತಕ್ಷಣಕ್ಕೆ ಸದೃಢಗೊಳ್ಳುವಂತೆ ಮಾಡಿದರೂ ಅದು ದೀರ್ಘಕಾಲಿಕವಾಗಿ ಸಂಕಷ್ಟಕ್ಕೆ ದೂಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ನಡುವೆ ಅಮೆರಿಕ – ಚೀನಾ ನಡುವಣ ವ್ಯಾಪಾರ ಯುದ್ಧ ಅಮೆರಿಕನ್ನರ ಮೇಲೆ ಸಣ್ಣದಾಗಿ ಪರಿಣಾಮ ಬೀರುತ್ತಿದೆ.
ಇನ್ನು ಚೀನಾ ಮಾರುಕಟ್ಟೆ ಸಹ ತಲ್ಲಣಗೊಂಡಿರುವುದರಿಂದ ಮುಂದಿನ ದಿನಗಳ ಸಂಕಷ್ಟಕರವಾಗಿಯೇ ಇರಲಿವೆ ಎಂದು ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಇಂದು ಏಷ್ಯನ್ ಮಾರುಕಟ್ಟೆಗಳು ಚೇತರಿಕೆ ದಾರಿ ಹಿಡಿದ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯೂ ಕೊಂಚ ಉಸಿರಾಡುವಂತೆ ಮಾಡಿದೆ.
Click this button or press Ctrl+G to toggle between Kannada and English