ಮಂಗಳೂರು: ಪ್ರಪಂಚದಲ್ಲಿ ಜನ ಗೋವಿಗೆ ವಿಶೇಷವಾದ ಗೌರವ ಕೊಡ್ತಾರೆ. ಗೋವನ್ನು ಭಾರತೀಯರು ದೇವರೆಂದು ಪೂಜಿಸುತ್ತಾರೆ. ಗೋವು ದೇವತೆ ಮಾತ್ರ ಅಲ್ಲ ದೇಶದ ಆರ್ಥಿಕ ಅಭಿವೃದ್ಧಿಗೂ ವಿಶೇಷ ಸ್ಥಾನವನ್ನು ಪಡೆದಿದೆ ಎಂದು ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಸಚಿವ ಯು.ಟಿ.ಖಾದರ್ ವಿರುದ್ದ ಪರೋಕ್ಷವಾಗಿ ಮಾತಿನ ದಾಳಿ ಮಾಡಿದ ಅವರು ಗೋಹಂತಕರಿಗೆ ಬೆಂಬಲ ಕೊಡುವುವರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು ಮತ್ತು ಅಂಥವರಿಗೆ ದೇವಸ್ಥಾನದ ಕಾರ್ಯಕ್ರಮಗಳಿಗೆ ಆಹ್ವಾನ ನೀಡಬಾರದು ಎಂದು ಹೇಳಿದ್ದಾರೆ.
ಸ್ಮಾರ್ಟ್ ಸಿಟಿ ಹಣ ಕಸಾಯಿಖಾನೆಗೆ ಮೀಸಲಿಟ್ಟ ವಿಚಾರಕ್ಕೆ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ವಿಶ್ವಹಿಂದೂ ಪರಿಷತ್-ಬಜರಂಗದಳ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರಾಮಾಯಣದಲ್ಲಿ ರಾಮ ಗೋವಿನ ಪೂಜೆ ಮಾಡಬೇಕು ಎಂದು ಹೇಳುತ್ತಾನೆ. ಆದ್ರೆ ನೀವು ಒಂದು ಬಾಯಲ್ಲಿ ಮಂತ್ರವನ್ನ ಹೇಳಿ ಇನ್ನೊಂದು ಕಡೆ ಗೋಹತ್ಯೆಗೆ ಪರೋಕ್ಷ ಬೆಂಬಲ ನೀಡ್ತೀರಿ. ಹೀಗಾಗಿ ದ.ಕ ಜಿಲ್ಲೆಯ ಎಲ್ಲಾ ಧಾರ್ಮಿಕ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರಿಗೆ ಮನವಿ ಮಾಡಿಕೊಳ್ಳುತ್ತೇನೆ.
ದಯವಿಟ್ಟು ಗೋ ಹತ್ಯೆ ಬೆಂಬಲಿಸೋರನ್ನ ದೇವಸ್ಥಾನಕ್ಕೆ ಆಹ್ವಾನಿಸಬೇಡಿ ಅಂದರು. ಆದ್ರೆ ಬ್ರಹ್ಮಕಲಶ, ಜೀರ್ಣೋದ್ಧಾರ ಕಾರ್ಯಗಳಿಗೆ ಗೋ ಹತ್ಯೆ ಬೆಂಬಲಿಸುವವರು, ಗೋ ಮಾಂಸ ತಿನ್ನೋರನ್ನ ಆಹ್ವಾನಿಸಿ ಪ್ರಸಾದ ಕೊಡಲಾಗ್ತಿದೆ. ಆದ್ರೆ ಈ ಬಗ್ಗೆ ಹಿಂದೂಗಳು ಸ್ವಲ್ಪ ಯೋಚಿಸಿ. ನಮ್ಮ ಗೋವನ್ನ ಕಡಿದು ತಿನ್ನೋರಿಗೆ, ನಮ್ಮ ಭಾವನೆಗಳಿಗೆ ಧಕ್ಕೆ ತರೋರಿಗೆ ನಾವು ಬೆಂಬಲ ಕೊಡ್ತಾ ಇದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂಥವರಿಗೆ ದೇವಸ್ಥಾನದ ಪ್ರವೇಶ ಕೊಡಿಸಿ ಪ್ರಸಾದ ಕೊಡುವ ಕೆಲಸ ನಿಲ್ಲಿಸಿ ಎಂದು ಸಚಿವ ಖಾದರ್ ವಿರುದ್ಧ ಶರಣ್ ಪಂಪ್ ವೆಲ್ ಪರೋಕ್ಷವಾಗಿ ಗುಡುಗಿದರು.
ಇನ್ನು ಈ ಪ್ರತಿಭಟನೆಯಲ್ಲಿ ಮಾತನಾಡಿದ ದುರ್ಗಾವಾಹಿನಿ ಸಂಚಾಲಕಿ ವಿದ್ಯಾಮಲ್ಯ, ಸಚಿವ ಯು.ಟಿ.ಖಾದರ್ ಗೆ ಗೋ ಮಾತೆಯ ಶಾಪ ತಟ್ಟಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಿಂದ ಸದ್ಯಕ್ಕಂತೂ ನೀವು ಬರಬಾರದು ಅಂತ ಗೋ ಮಾತೆಯಲ್ಲಿ ಪ್ರಾರ್ಥಿಸ್ತೇನೆ. ಆಸ್ಪತ್ರೆಯಲ್ಲಿ ನರಳಿ ನರಳಿ ಗೋ ಮಾತ್ರೆ ಮೂತ್ರ ಕುಡಿಯುವ ಪರಿಸ್ಥಿತಿ ಬರಲಿ. ಗೋ ಮೂತ್ರ ಕುಡಿದ ನಂತರ ಗೋ ಮಾತೆ ಆಶೀರ್ವಾದ ಬೇಡಲು ಬನ್ನಿ ಅಂತ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಮತ್ತಿತ್ತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English