ದೇಸಿ ತುಪ್ಪ ಮಾರಾಟ ಮಾಡುವ ಸೋಗಿನಲ್ಲಿ ಕಳ್ಳತನ ಮಾಡಿದ ಖದೀಮರು!

12:48 PM, Friday, October 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

policeಬೆಂಗಳೂರು: ದೇಶಿ ತುಪ್ಪ ಹಾಗೂ ಹಾಲನ್ನು ಮಾರುವ ಸೋಗಿನಲ್ಲಿ ದೆಹಲಿಯಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಸಂಜಯ್ ನಗರದ ಮನೆಯೊಂದರಲ್ಲಿ 45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಅಂತರ್ರಾಜ್ಯ ಕಳ್ಳನನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಗಾಜಿಯಾಬಾದ್ ಜಿಲ್ಲೆಯ ಮೀನು ಆಲಿಯಾಸ್ ಚಾಚಾಜಿ ಬಂಧಿತ ಆರೋಪಿ. ಕೃತ್ಯದಲ್ಲಿ ಕೈ ಜೋಡಿಸಿದ್ದ ಮತ್ತೊಬ್ಬ ಆರೋಪಿ ಇಮ್ರಾನ್ ತಲೆಮರೆಸಿಕೊಂಡಿದ್ದಾನೆ. ಈತನ ಬಂಧನದಿಂದ ಮನೆಗಳ್ಳತನ ಮಾಡಿದ್ದ 45 ಲಕ್ಷ ರೂ. ಬೆಲೆಯ 1 ಕೆಜಿ 365 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ಆಗಸ್ಟ್ನಲ್ಲಿ ಅನಿಲ್ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ದೂರಿನ್ವನಯ ಆರೋಪಿಯನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೂರುದಾರರ ಸಂಬಂಧಿಕರೊಬ್ಬರು ದೆಹಲಿಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದು, ಇಲ್ಲಿಗೆ ಆಗಮಿಸುತ್ತಿದ್ದ ಆರೋಪಿಗಳು ದೇಶಿ ತುಪ್ಪ ಹಾಗೂ ಹಾಲು‌ ಮಾರಾಟ‌ ಮಾಡುತ್ತಿದ್ದರು. ಇದೇ ಸಲುಗೆ ಮೇರೆಗೆ‌ ಬಟ್ಟೆ ಅಂಗಡಿ‌ ಮಾಲೀಕ ಬೆಂಗಳೂರಿನಲ್ಲಿ ತಂಗಿ ಮನೆಗೂ ತುಪ್ಪ ನೀಡುವಂತೆ ಹೇಳಿ ಆರ್.ಆರ್. ನಗರದಲ್ಲಿರುವ ತಂಗಿ ಮನೆ ವಿಳಾಸ ಕೊಟ್ಟಿದ್ದಾನೆ. ಇದೇ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದ ಆರೋಪಿಗಳು ಅಂಗಡಿ‌ ಮಾಲೀಕನಿಗೂ ತಿಳಿಸದೇ ನೇರವಾಗಿ ಆರ್.ಅರ್. ನಗರದ ನಿವಾಸಕ್ಕೆ ಬಂದು ಪರಿಚಯಿಸಿಕೊಂಡು ತುಪ್ಪ ಹಾಗೂ ಹಾಲು‌ ನೀಡಿದ್ದಾರೆ. ಅಲ್ಲದೇ ರಾಮನಗರದಲ್ಲಿ ನಮ್ಮ ಹಸುಗಳಿದ್ದು, ಈ ಮೂಲಕ ಬೆಂಗಳೂರಿನಲ್ಲಿ ತುಪ್ಪ ಹಾಗೂ ಹಾಲು‌ ಮಾರಾಟ ಮಾಡುವುದಾಗಿ ನಂಬಿಸಿದ್ದರು.‌

ಮನೆಯವರಿಗೆ ನಂಬಿಕೆ ಬರಲು ನಿರಂತರವಾಗಿ‌ ಹಾಲು ಹಾಗೂ ತುಪ್ಪ ನೀಡಿ‌ ಮತ್ತಷ್ಟು ಹತ್ತಿರವಾಗಿದ್ದರು. ಪರಿಚಯ ಕ್ರಮೇಣ ಸಲುಗೆಗೆ ತಿರುಗಿದೆ.‌ ಈ ವೇಳೆ ಮುಖ್ಯ ಆರೋಪಿ ಮೀನು‌ ನನ್ನ ಮಗಳಿಗೆ‌ ಮದುವೆ ಏರ್ಪಟ್ಟಿದ್ದು, ಚಿನ್ನಾಭರಣ ಖರೀದಿಸಬೇಕೆಂದು ಹೇಳಿದ್ದಾನೆ.‌ ಇದಕ್ಕೆ‌ ಮನೆಯವರು ಸಹ ಸಂಜಯ್ ನಗರದಲ್ಲಿರುವ ಸಂಬಂಧಿಕರಾದ ಅನಿಲ್ ಮನೆಗೆ ಕರೆದುಕೊಂಡು ಹೋಗಿ ಪರಿಚಯಿಸಿದ್ದರು.

ಕಳ್ಳತನ‌ ಮಾಡಲು ಇದೇ‌‌ ಮನೆ ಸೂಕ್ತ ಎಂದು ನಿರ್ಧರಿಸಿಕೊಂಡ ಆರೋಪಿಗಳು ನಿರಂತರವಾಗಿ ಮನೆಯವರ ಮೇಲೆ ನಿಗಾ ವಹಿಸಿದ್ದರು. ಅಲ್ಲದೆ ಪರಿಚಯ ಇದ್ದಿದ್ದರಿಂದ ಆಗಾಗ ಮನೆಗೆ ಹೋಗಿ ಸಹ ಬರುತ್ತಿದ್ದರು.‌ ಇದೇ ಕಳೆದ ಆಗಸ್ಟ್ 13 ರಂದು ಮನೆಗೆ ತೆರಳಿದ್ದರು.‌ ಈ ವೇಳೆ ಸುಸ್ತು ಆಗುತ್ತಿದೆ ಎಂದು ಹೇಳಿದಕ್ಕೆ ಅನಿಲ್ ಪತ್ನಿಯು ರೆಸ್ಟ್ ಮಾಡುವಂತೆ ರೂಂಗೆ ಕಳುಹಿಸಿದ್ದರು. ಈ ವೇಳೆ ರೂಂನ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ‌ ಮಾಡಿದ್ದ.‌ ಘಟನೆ ನಡೆದ ಮೂರು ದಿನಗಳ ಬಳಿಕ‌‌ ಕಳ್ಳತನ‌ ಕೃತ್ಯ ಬಯಲಾಗಿದ್ದು, ಈ ಸಂಬಂಧ ನೀಡಿದ ದೂರಿನ ಮೇರೆಗೆ ಅಂತರ್ರಾಜ್ಯ ಆರೋಪಿಯನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English