ಮಂಗಳೂರು : ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾ ಪ್ರಯುಕ್ತ ಕಳೆದ ಒಂಬತ್ತು ದಿನಗಳ ಕಾಲ ಭಕ್ತರಿಂದ ಪೂಜಿಸಲ್ಪಟ್ಟ ನವದುರ್ಗೆಯರು, ಶಾರದಾ ಮಾತೆ ಹಾಗೂ ಗಣಪತಿಯ ವಿಗ್ರಹವನ್ನು ಶನಿವಾರ ಬೆಳಗ್ಗೆ ಕ್ಷೇತ್ರದ ಪುಷ್ಕರಿಣಿಯಲ್ಲಿ ವಿಸರ್ಜಿಸಲಾಯಿತು.
ಶನಿವಾರ ಬೆಳಗ್ಗೆ 8:29ರರ ವೇಳೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರನ ಸನ್ನಿಧಿಯ ಪುಷ್ಕರಿಣಿಯಲ್ಲಿ ಶಾರದಾ ಮಾತೆ ಯ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಮಾಪನಗೊಂಡಿತು.
ರಾತ್ರಿಯುದ್ದಕ್ಕೂ ಸಾಗಿದ ಶೋಭಾಯಾತ್ರೆ ಸುಮಾರು 9 ಕಿ.ಮೀ. ಸಾಗಿದ್ದು, ಮೆರವಣಿಗೆ ವೀಕ್ಷಣೆಗೆ ಲಕ್ಷಾಂತರ ಜನಸಮೂಹ ಆಗಮಿಸಿದ್ದರು. 75ಕ್ಕೂ ಅಧಿಕ ವಿವಿಧ ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ವಿವಿಧ ಪ್ರದೇಶಗಳ ವಿವಿಧ ಹುಲಿವೇಷಗಳ ತಂಡಗಳ ಜತೆ ಯುವತಿಯರು ಹುಲಿ ವೇಷ ಕೂಡಾ ಗಮನ ಸೆಳೆದವು.
ಶುಕ್ರವಾರ ಸಂಜೆ ಕುದ್ರೋಳಿ ದೇವಸ್ಥಾನದಿಂದ ಹೊರಟ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಮಣ್ಣಗುಡ್ಡೆ- ಲೇಡಿಹಿಲ್ ಸರ್ಕಲ್-ಲಾಲ್‌ಬಾಗ್-ಪಿವಿಎಸ್ ಸರ್ಕಲ್-ನವಭಾರತ ಸರ್ಕಲ್-ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ (ವಿ.ವಿ. ಕಾಲೇಜು ಬಳಿ ಬಲಕ್ಕೆ ತಿರುಗಿ)-ಗಣಪತಿ ಹೈಸ್ಕೂಲ್ ರಸ್ತೆ-ಕಾರ್‌ಸ್ಟ್ರೀಟ್-ಚಿತ್ರಾ ಟಾಕೀಸ್- ಅಳಕೆ ಮಾರ್ಗವಾಗಿ ಸಂಚರಿಸಿ ಶನಿವಾರ ಬೆಳಗ್ಗೆ ಕ್ಷೇತ್ರಕ್ಕೆ ತಲುಪಿತು.
ಅದಕ್ಕೂ ಮೊದಲು ಗೋಕರ್ಣನಾಥ ಮತ್ತು ಅನ್ನಪೂರ್ಣೇಶ್ವರಿಯ ಉತ್ಸವ ಮೂರ್ತಿಗಳನ್ನು ಬೆಳ್ಳಿಯ ರಥದಲ್ಲಿರಿಸಿ ಪುಷ್ಕರಿಣಿಯ ವಸಂತ ಮಂಟಪಕ್ಕೆ ತಂದು ಪೂಜೆ ನೆರವೇರಿಸಲಾಯಿತು.
Click this button or press Ctrl+G to toggle between Kannada and English