ಮಂಗಳೂರು : ಚಿಲ್ಲರೆ ಬೀಡಿ ಸಿಗರೇಟ್-ತಂಬಾಕು ಪದಾರ್ಥಗಳ ಮಾರಾಟಕ್ಕೆ ಪ್ರತ್ಯೇಕ ಲೈಸೆನ್ಸ್ ಪಡೆಯಬೇಕೆಂಬ ರಾಜ್ಯ ಸರ್ಕಾರದ ಅವೈಜ್ಞಾನಿಕ ತೀರ್ಮಾನದ ವಿರುದ್ಧ, ವಿನಾ:ಕಾರಣ ಪೋಲಿಸ್ ದೌರ್ಜನ್ಯದ ವಿರುದ್ಧ, ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರ ಬದುಕನ್ನು ರಕ್ಷಿಸಲು ಒತ್ತಾಯಿಸಿ ದ.ಕ.ಜಿಲ್ಲಾ ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರ ಸಂಘದ ನೇತ್ರತ್ವದಲ್ಲಿ ನಗರದಲ್ಲಿ ಸೋಮವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಬೃಹತ್ ಪ್ರತಿಭಟನಾ ಪ್ರದರ್ಶನ ಜರುಗಿತು.
300ಕ್ಕೂ ಮಿಕ್ಕಿದ ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರು ನಗರದ ಮಿನಿ ವಿಧಾನಸೌಧದಿಂದ ಮೆರವಣಿಗೆಯಲ್ಲಿ ಹೊರಟು,ಬೀಡಿ ಸಿಗರೇಟ್ ಮಾರಾಟಕ್ಕೆ ಪ್ರತ್ಯೇಕ ಲೈಸನ್ಸ್ ಬೇಡವೇ ಬೇಡ,ದ್ವಂದ್ವ ನೀತಿಯನ್ನು ಪ್ರತಿಪಾದಿಸುವ ರಾಜ್ಯ ಸರಕಾರಕ್ಕೆ ಧಿಕ್ಕಾರ,ಬಡಪಾಯಿ ಗೂಡಂಗಡಿದಾರರ ಬದುಕನ್ನು ರಕ್ಷಿಸಿರಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು,ಕೇಂದ್ರ ರಾಜದಯ ಸರಕಾರಗಳು ಧೂಮಪಾನ ನಿಷೇಧ ಕಾನೂನು ಜಾರಿಗೊಳಿಸುವತ್ತ ದಾಪುಗಾಲು ಇಡುತ್ತಿದೆ.ಇದರಿಂದಾಗಿ ಲಕ್ಷಾಂತರ ದುಡಿಯುವ ವರ್ಗದ ಬದುಕಿನ ಮೇಲೆ ಪ್ರಹಾರ ನಡೆಸಿದೆ.ಮತ್ತೊಂದು ಕಡೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ರತ್ನ ಕಂಬಳಿ ಹಾಸಿ ಭವ್ಯ ಸ್ವಾಗತ ಕೋರುತ್ತಿದೆ.ಈ ಮೂಲಕ ಎರಡೂ ಸರಕಾರಗಳು ಉಳ್ಳವರ ಪರವಾಗಿದೆ ಎಂದು ಸಾಬೀತು ಪಡಿಸಿದೆ” ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷರೂ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ,”ದ.ಕ ಜಿಲ್ಲೆಯಾದ್ಯಂತ 5000 ಕ್ಕೂ ಮಿಕ್ಕಿದ ಗೂಡಂಗಡಿದಾರರು ಚಿಲ್ಲರೆ ಬೀಡಿ ಸಿಗರೇಟ್ ಮಾರಾಟ ಮಾಡುವ ಮೂಲಕ ತಮ್ಮ ಬದುಕನ್ನು ನಡೆಸುತ್ತಿದ್ದಾರೆ.ಆದರೆ ರಾಜ್ಯ ಸರ್ಕಾರವು ಯಾವುದೇ ರೀತಿಯ ಕಾರಣಗಳನ್ನು ನೀಡದೆ ಗೂಡಂಗಡಿಗಳಲ್ಲಿ ಚಿಲ್ಲರೆಯಾಗಿ ಬೀಡಿ ಸಿಗರೇಟ್ ಗಳನ್ನು ಮಾರಾಟ ಮಾಡಬಾರದೆಂದು ಕಟ್ಟಪ್ಪಣೆ ಹೊರಡಿಸಿದೆ.ಇದನ್ನೇ ನೆಪ ಮಾಡಿ ಪೋಲಿಸರು ವಿನಾ:ಕಾರಣ ಕಿರುಕುಳವನ್ನು ನೀಡಿ ವಿಪರೀತ ದಂಡವನ್ನು ವಸೂಲಿ ಮಾಡುತ್ತಿರುವುದು ಮಾತ್ರವಲ್ಲದೆ ದೈಹಿಕ ಹಲ್ಲೆ ಯನ್ನು ಕೂಡ ನಡೆಸಿರುತ್ತಾರೆ.ಹಾಗೂ ಪ್ರಸ್ತುತ ರಾಜ್ಯ ಸರ್ಕಾರವು ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಕ್ಕೆ ಸ್ಥಳೀಯ ಸಂಸ್ಥೆಗಳಿಂದ ಪ್ರತ್ಯೇಕ ಲೈಸನ್ಸ್ ಹೊಂದಿರಬೇಕೆಂಬ ಆದೇಶವನ್ನು ನೀಡಿದ್ದು ಇದು ತೀರಾ ಅವೈಜ್ಞಾನಿಕವಾಗಿದೆ. ಈಗಾಗಲೇ ಗೂಡಂಗಡಿದಾರರು ಸ್ಥಳೀಯ ಸಂಸ್ಥೆಯಿಂದ ಲೈಸನ್ಸ್ ಹೊಂದಿರುತ್ತಾರೆ. ಈಗ ಮತ್ತೆ ಪ್ರತ್ಯೇಕವಾಗಿ ಲೈಸನ್ಸ್ ಪಡೆಯುವುದು ಎಷ್ಟು ಸರಿ…?ಎಂದು ಪ್ರಶ್ನಿಸಿರುವ ಅವರು, ಒಟ್ಟಿನಲ್ಲಿ ಸಿಗರೇಟ್ ಕಂಪೆನಿಗಳ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗದ ರಾಜ್ಯ ಸರ್ಕಾರವು ಬಡಪಾಯಿ ಗೂಡಾಂಗಡಿದಾರರ ಮೇಲೆ ಕ್ರಮ ಕೈಗೊಳ್ಳುವ ಮೂಲಕ ತನ್ನ ಪೌರುಷವನ್ನು ತೋರಿಸುತ್ತಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರುರವರು ಉಪಸ್ಥಿತರಿದ್ದರು.
ಹೋರಾಟದ ನೇತ್ರತ್ವವನ್ನು ಸಂಘದ ನಾಯಕರಾದ ಅಬೂಬಕ್ಕರ್ ಕುದ್ರೋಳಿ,ಗಣೇಶ್,ಅಬ್ದುಲ್ ರೆಹಮಾನ್,ರಾಮಚಂದ್ರ ಸಾಲಿಯಾನ್,ರಾಧೇಶ್ಯಾಮ್,ರಾಜೇಶ್,ಮೋಹನ್ ದಾಸ್ ಆಳ್ವಾ,ಹರೀಶ್ ಮುಂತಾದವರು ವಹಿಸಿದ್ದರು.
Click this button or press Ctrl+G to toggle between Kannada and English