ಧರ್ಮಸ್ಥಳ : ವಿವಿಧ ವಿನ್ಯಾಸದ ಆಭರಣಗಳು, ಪೂಜಾ ಪರಿಕರಗಳು, ಕಲ್ಲಿನ ಹಾಗೂ ಲೋಹದ ಕಲಾಕೃತಿಗಳು, ವಿಂಟೇಜ್ ಕಾರುಗಳು, ಚಿತ್ತಾಕರ್ಷಕ ವರ್ಣಚಿತ್ರಗಳು, ಗೃಹ ಬಳಕೆಯ ವಸ್ತುಗಳು, ವೈವಿಧ್ಯಮಯ ಕ್ಯಾಮರಾಗಳು, ರೈಲ್ವೆ ಎಂಜಿನ್, ವಿಮಾನ, ಮರದ ರಥಗಳು, ಪೆನ್ನುಗಳು, ಕನ್ನಡಕಗಳು – ಹೀಗೆ ವೈವಿಧ್ಯಮಯ ಅಪೂರ್ವ ವಸ್ತುಗಳ ಭಂಡಾರ “ಮಂಜೂಷಾ” ವಸ್ತು ಸಂಗ್ರಹಾಲಯ. ಅಪಾರ ಜ್ಞಾನದ ಆಕರ, ಮಾಹಿತಿಯ ಕಣಜವಾಗಿದ್ದು ಎಲ್ಲರ ಕಣ್ಮನ ಸೆಳೆಯುತ್ತಿದೆ.
ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಸಂಗೀತ, ಯಕ್ಷಗಾನ, ಭೂತಾರಾಧನೆ – ಹೀಗೆ ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವ ಗತ ಕಾಲದ ವೈಭವವನ್ನು ನೆನಪಿಸುವ ಅಪೂರ್ವ ವಸ್ತುಗಳು ಇಲ್ಲಿವೆ.
ನಾಡಿನ ಪವಿತ್ರ ತೀರ್ಥಕ್ಷೇತ್ರ ಹಾಗೂ ಯಾತ್ರಾ ಸ್ಥಳವಾದ ಧರ್ಮಸ್ಥಳಕ್ಕೆ ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ. ಧರ್ಮಸ್ಥಳಕ್ಕೆ ಸಂಬಂಧಪಟ್ಟಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತ. 1968 ರ ಅಕ್ಟೋಬರ್ 24 ರಂದು ತನ್ನ ಇಪ್ಪತ್ತನೆ ವರ್ಷ ಪ್ರಾಯದಲ್ಲಿ ಧರ್ಮಾಧಿಕಾರಿ ಪೀಠವನ್ನಲಂಕರಿಸಿದ ಅಂದಿನ ವೀರೇಂದ್ರ ಕುಮಾರ್ 50 ವರ್ಷಗಳ ಸೇವೆಯನ್ನು ಪೂರೈಸಿದ್ದು 24 ರಂದು ಬುಧವಾರ ಸುವರ್ಣ ಮಹೋತ್ಸವ ಆಚರಣೆ ಸಂಭ್ರಮ-ಸಡಗರದಿಂದ ನಡೆಯಲಿದೆ.
ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಯ ಸಂರಕ್ಷಣೆಯೊಂದಿಗೆ ಧರ್ಮಸ್ಥಳದ ಖ್ಯಾತಿಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿದ ಕೀರ್ತಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ.
ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಧರ್ಮಸ್ಥಳದಲ್ಲಿ ನಿತ್ಯೋತ್ಸವ, ಪ್ರತಿವರ್ಷ ನಡೆಯುವ ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ವೇದಿಕೆಯ ಮೂಲಕ ವ್ಯಸನ ಮುಕ್ತ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮಾಭಿವೃದ್ಧಿ ಮತ್ತು ಸ್ವ- ಉದ್ಯೋಗ ತರಬೇತಿ ಕೇಂದ್ರ, ಮಹಿಳಾ ಸಬಲೀಕರಣ, ಕಲ್ಯಾಣ ಮಂಟಪಗಳು, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ, ಪ್ರಕೃತಿ ಪರಿಸರ ಸಂರಕ್ಷಣೆ, ಕಾಲಮಿತಿಯ ಯಕ್ಷಗಾನ ಪ್ರದರ್ಶನ, ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನ ಆಯುರ್ವೇದಕ್ಕೆ ಪ್ರೋತ್ಸಾಹ – ಇವೆಲ್ಲ ವೀರೇಂದ್ರ ಹೆಗ್ಗಡೆಯವರ ಚಿಂತನ-ಮಂಥನದಿಂದ ಯಶಸ್ವಿಯಾಗಿ ಅನುಷ್ಠಾನಗೊಂಡ ಯೋಜನೆಗಳು.
ಮಂಜೂಷಾ ವಸ್ತು ಸಂಗ್ರಹಾಲಯ: ಹೈದರಾಬಾದ್‌ನ ಸಾಲಾರ್‌ಜಂಗ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ಹೆಗ್ಗಡೆಯವರು ಅಲ್ಲಿ ಪುರಾತನ ಹಾಗೂ ಅಪೂರ್ವ ವಸ್ತುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಇಟ್ಟಿರುವುದನ್ನು ನೋಡಿ ಪ್ರೇರಿತರಾಗಿ ಧರ್ಮಸ್ಥಳದಲ್ಲಿ ವಸ್ತು ಸಂಗ್ರಹಾಲಯ ಪ್ರಾರಂಭಿಸಲು ದೃಢ ಸಂಕಲ್ಪ ಮಾಡಿದರು. ಆರಂಭದ ಹಂತದಲ್ಲಿ ಹೆಗ್ಗಡೆಯವರ ಬೀಡಿನ (ನಿವಾಸದ) ಮಾಳಿಗೆಯಲ್ಲಿ ಗಾಜಿನ ಮನೆಯಲ್ಲಿ ಸಣ್ಣ ಪ್ರಮಾಣದ ವಸ್ತು ಸಂಗ್ರಹಾಲಯವಿತ್ತು.
ಅಪೂರ್ವ ವಸ್ತುಗಳ ಸಂಗ್ರಹ ಹೆಚ್ಚಾದಂತೆ ವಸ್ತು ಸಂಗ್ರಹಾಲಯಕ್ಕಾಗಿ ವಿಸ್ತೃತ ಕಟ್ಟಡ ನಿರ್ಮಿಸಬೇಕಾಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಜನಪದ ವಸ್ತು ಸಂಗ್ರಹದಲ್ಲಿ ಪರಿಣತರಾಗಿದ್ದ ಹಾಗೂ ಅಂದಿನ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಪಿ.ಆರ್. ತಿಪ್ಪಸ್ವಾಮಿ ಕೆಲವು ವರ್ಷ ಧರ್ಮಸ್ಥಳದಲ್ಲಿ ಇದ್ದು ವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ ನೀಡಲಾಯಿತು. 1998 ರಲ್ಲಿ ಅಂದಿನ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಇ.ಎಸ್. ವೆಂಕಟರಾಮಯ್ಯ “ಮಂಜೂಷಾ” ಕಟ್ಟಡ ಉದ್ಘಾಟಿಸಿದರು.
ತಾಳೆಗರಿ ಗ್ರಂಥಗಳ ರಕ್ಷಣೆಗಾಗಿ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಪ್ರತಿಷ್ಠಾನ ಒಂದನ್ನು ಪ್ರಾರಂಭಿಸಿದರು. ಕವಿ ಕುವೆಂಪು ಅವರು ಇದಕ್ಕೆ “ಶ್ರೀ ಮಂಜುನಾಥ ಸ್ವಾಮಿ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ” ಎಂದು ನಾಮಕರಣ ಮಾಡಿದರು.
ಖ್ಯಾತ ವಿದ್ವಾಂಸರಾದ ಪ್ರೊ. ಗೌ. ಮ. ಉಮಾಪತಿ ಶಾಸ್ತ್ರಿಯವರ ನೇತೃತ್ವದಲ್ಲಿ ರಾಜ್ಯದಲ್ಲಿಯೇ ಪ್ರಮುಖ ಪ್ರಾಚ್ಯ ಸಂಶೋಧನಾ ಕೇಂದ್ರವಾಗಿ ಇದು ಮಾನ್ಯತೆ ಪಡೆದಿದೆ. ಅನೇಕ ಮಂದಿ ವಿದ್ಯಾರ್ಥಿಗಳು, ಸಂಶೋಧಕರು ಇಲ್ಲಿಗೆ ಭೇಟಿ ನೀಡಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಕಾರು ಮ್ಯೂಸಿಯಂ ನಲ್ಲಿ ನೂರಕ್ಕೂ ಮಿಕ್ಕಿದ ವಿಂಟೇಜ್ ಕಾರುಗಳಿದ್ದು ಅವುಗಳಿಗೆ ಕಾಯಕಲ್ಪ ನೀಡಲಾಗಿದೆ. ಎಲ್ಲವೂ ಬಳಕೆಯ ಸುಸ್ಥಿತಿಯಲ್ಲಿವೆ. ಎತ್ತಿನ ಗಾಡಿ, ಕುದುರೆ ಗಾಡಿ, ಕಾರುಗಳು. ರೈಲು, ವಿಮಾನ ರಥಗಳು- ಇವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಏಕಕಾಲಕ್ಕೆ ಪ್ರಪಂಚದ ಎಲ್ಲಾ ನಗರಗಳ ಸಮಯವನ್ನು ಸೂಚಿಸುವ ಗಡಿಯಾರ, “ಗಳಿಗೆ ಬಟ್ಟಲು”, ಎಲ್ಲಾ ದೇಶಗಳ ನೋಟುಗಳು, ಖನಿಜ ಶಿಲೆಗಳು, ಆಯುಧಗಳು, ಭೂತಾರಾಧನೆಯ ಆಭರಣಗಳು, ಪೋಷಾಕುಗಳು- ಖಡ್ಗ, ಚಾಕು, ಗುರಾಣಿ, ತುಳು ಶಾಸನಗಳು – ಎಲ್ಲವೂ ಇಲ್ಲಿವೆ.
ಮ್ಯೂಸಿಯಂನಲ್ಲಿರುವ ಪ್ರತಿಯೊಂದು ವಸ್ತುವನ್ನೂ ಗುರುತಿಸಿ, ಗೌರವಿಸಿ, ವರ್ಣಿಸಿ ಅದರ ಸಂರಕ್ಷಣೆ ಮತ್ತು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವ ತಾಣವೇ “ಮಂಜೂಷಾ” ವಸ್ತು ಸಂಗ್ರಹಾಲಯ. ಇದೀಗ ವಿಸ್ತೃತ ನೂತನ ಕಟ್ಟಡವನ್ನು 1,04,000 ಚದರ ಅಡಿಯ ವಿಸ್ತೀರ್ಣದ ಜಾಗದಲ್ಲಿ ನಿರ್ಮಿಸಿದ್ದು ನಾಳೆ ಬುಧವಾರ ರಾಜ್ಯ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಲೋಕಾರ್ಪಣೆ ಮಾಡುವರು. ಇದೇ ಸಂದರ್ಭ ಧರ್ಮಾಧಿಕಾರಿಯಾಗಿ 50 ವರ್ಷಗಳ ಸೇವೆಯನ್ನು ಪೂರೈಸಿದ ಡಿ. ವೀರೇಂದ್ರ ಹೆಗ್ಗಡೆಯವರನ್ನು ಮುಖ್ಯಮಂತ್ರಿ ಅಭಿನಂದಿಸುವರು.
Click this button or press Ctrl+G to toggle between Kannada and English