ಉಜಿರೆ: ಕೇಂದ್ರ ಸರ್ಕಾರದ ನೂರು ಕೋಟಿ ರೂ. ಅನುದಾನದೊಂದಿಗೆ ಬಿ.ಸಿ.ರೋಡ್-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸಲಾಗು ವುದು. 2019 ರ ಫೆಬ್ರವರಿಯಲ್ಲಿ ಧರ್ಮಸ್ಥಳದಲ್ಲಿ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಧರ್ಮಸ್ಥಳವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 23.5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಕಟಿಸಿದರು.
ಧರ್ಮಸ್ಥಳದಲ್ಲಿ ಬುಧವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಆಚರಣೆ ಸಂದರ್ಭ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮಾಡಿ ಅವರು ಮಾತನಾಡಿದರು.
ಈಗಾಗಲೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಲಮಿತಿಯಲ್ಲಿ ಕೆಲಸ ಮಾಡಿ 2019ರ ಜನವರಿ ಮೊದಲು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಧರ್ಮಸ್ಥಳದಲ್ಲಿ ನಿರ್ಮಿಸಲಾದ ಮಂಜೂಷಾ ವಸ್ತು ಸಂಗ್ರಹಾಲಯ ವಿಶ್ವದಲ್ಲೇ ಮಾದರಿ ವಸ್ತು ಸಂಗ್ರಹಾಲಯವಾಗಿದೆ ಎಂದು ಸಚಿವ ರೇವಣ್ಣ ಶ್ಲಾಘಿಸಿದರು.
ನಶಿಸಿ ಹೋಗುತ್ತಿರುವ ಐತಿಹಾಸಿಕ ದೇಗುಲಗಳಿಗೆ ಕಾಯಕಲ್ಪ ನೀಡಿ ಹೆಗ್ಗಡೆಯವರು ಜೀರ್ಣೋದ್ಧಾರ ಮಾಡುತ್ತಿರುವ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.
ಹೆಗ್ಗಡೆಯವರ ಜೀವನ-ಸಾಧನೆ ಬಗ್ಯೆ ಪ್ರಕಟಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಿದ ಹೇಮಾವತಿ ವಿ. ಹೆಗ್ಗಡೆ ಮಾತನಾಡಿ ಸದಾ ಕ್ರಿಯಾಶೀಲತೆಯೊಂದಿಗೆ ಚಿಂತನಶೀಲರಾಗಿ, ಸೃಜನಶೀಲರಾಗಿ ಹೆಗ್ಗಡೆಯವರು ದೇವರು ಕೊಟ್ಟ ಅವಕಾಶವನ್ನು ಸದುಪಯೋಗ ಮಾಡಿ ವ್ಯಕ್ತಿಯಾಗಿ, ಶಕ್ತಿಯಾಗಿ ಪೀಠ ಮತ್ತು ಪರಂಪರೆಯ ಘನತೆ, ಗೌರವ ಹೆಚ್ಚಿಸಿದ್ದಾರೆ. ಸೇವೆಯನ್ನು ದೀಕ್ಷೆಯಾಗಿ ಬದ್ಧತೆಯಿಂದ ಮಾಡುವ ಹೆಗ್ಗಡೆಯವರ ಸೇವೆ ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿ ವರ್ಷದ ಅವರ ಡೈರಿ ಅಧ್ಯಯನ ಯೋಗ್ಯ ಕೃತಿಯಾಗಿದೆ ಎಂದು ಹೇಮಾವತಿ ವಿ. ಹೆಗ್ಗಡೆ ಅಭಿಪ್ರಾಯಪಟ್ಟರು.
ಸ್ವರ್ಣ ದರ್ಶನ ಕೃತಿ ಬಿಡುಗಡೆ ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ವ್ಯಕ್ತಿತ್ವದಲ್ಲಿ ರಾಮನ ಎತ್ತರಕ್ಕೆ ಏರಿದ ಹೆಗ್ಗಡೆಯವರಿಂದಾಗಿ ಧರ್ಮಸ್ಥಳ ರಾಮರಾಜ್ಯವಾಗಿದೆ ಎಂದು ಬಣ್ಣಿಸಿದರು. ಧರ್ಮದೇವತೆಗಳ ಸಂದೇಶವನ್ನು ಜನಮನಕ್ಕೆ ಮುಟ್ಟಿಸಿದ ದಾರ್ಶನಿಕ ಹೆಗ್ಗಡೆಯವರು ಎಂದು ಹೇಳಿದರು.
ಪಟ್ಟಾಭಿಷೇಕ ದಿನಾಚರಣೆ ಸಂದರ್ಭ ಹೆಗ್ಗಡೆಯವರಿಗೆ ಸಿಬ್ಬಂದಿಯವರು ನೀಡುವ ಹಣ್ಣು-ಹಂಪಲನ್ನು ಸಾಂಕೇತಿವಾಗಿ ನೀಡಿ ಉಳಿದ ಮೊತ್ತವಾದ ರೂ. ೨,೭೫,೦೦೦/- ವನ್ನು ಸಚಿವ ಯು.ಟಿ. ಖಾದರ್ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.
ಸಚಿವ ಯು.ಟಿ. ಖಾದರ್ ವೆಬ್ ಸರಣಿಯ 12 ಸಂಚಿಕೆಗಳನ್ನು ಬಿಡುಗಡೆಗೊಳಿಸಿದರು. ಶಾಸಕ ಹರೀಶ್ ಪೂಂಜ ಕಾನೂರಾಯಣ ಸಿ.ಡಿ. ಬಿಡುಗಡೆಗೊಳಿಸಿದರು. ಧಾರವಾಡದಲ್ಲಿರುವ ಎಸ್.ಡಿ.ಎಂ. ಮೆಡಿಕಲ್ ಕಾಲೇಜಿಗೆ ಸ್ವಾಯತ್ತತೆ ದೊರಕಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಸಚಿವ ಯು.ಟಿ. ಖಾದರ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಕ್ರಾಂತಿಕಾರಿ ಪರಿವರ್ತನೆ ಆಗಿ ಜನರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಹೆಗ್ಗಡೆಯವರು ಪ್ರಕೃತಿ ಚಿಕಿತ್ಸೆ, ಯೋಗ ಮತ್ತು ಆಯುರ್ವೇದಕ್ಕೆ ನೀಡುವ ಪ್ರೋತ್ಸಾಹ ಶ್ಲಾಘನೀಯವಾಗಿದೆ ಎಂದರು.
ಧರ್ಮಸ್ಥಳದಲ್ಲಿರುವ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತಾನು ಸೇರಿದ ಬಳಿಕ ಪೂರ್ಣ ಸಸ್ಯಹಾರಿಯಾಗಿದ್ದೇನೆ ಎಂದು ಸಚಿವ ಖಾದರ್ ಹೇಳಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಯೋಜನೆ ಮೂಲಕ ಆದ ಪರಿವರ್ತನೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದ್ದು ಅಧ್ಯಯನಕ್ಕೆ ಮಾದರಿಯಾಗಿದೆ ಎಂದರು.
ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ದೂರದೃಷ್ಟಿಯ ಕಾರ್ಯಕ್ರಮಗಳನ್ನು ಅಳವಡಿಸಿ ಬದುಕನ್ನು ಕಟ್ಟುವ ಕಾಯಕ ಮಾಡಲಾಗುತ್ತಿದೆ. ಪರಿವರ್ತನೆಯೊಂದಿಗೆ ಮೂಲ ಸತ್ವ, ಮೂಲ ಸೂತ್ರ ಹಾಗೂ ಸಂಪ್ರದಾಯವನ್ನು ಕಡೆಗಣಿಸಬಾರದು. ಮಾನವೀಯತೆ ಮರೆಯಬಾರದು. ಇದಕ್ಕಾಗಿ ಮಂಜೂಷಾ ವಸ್ತು ಸಂಗ್ರಹಾಲಯ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ಹೊಸ ಯೋಜನೆಗಳು:
ಬೆಂಗಳೂರಿನಲ್ಲಿ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಮಂಗಳೂರಿನಲ್ಲಿ ಹೊಸ ಆಂಗ್ಲ ಮಾಧ್ಯಮ ಶಾಲೆ, ಉಡುಪಿ ಮತ್ತು ಹಾಸನದಲ್ಲಿರುವ ಆಯುರ್ವೇದ ಆಸ್ಪತ್ರೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಪುಸ್ತಕಗಳನ್ನು ರಚಿಸಿದ ಡಾ. ಕೆ. ಚಿನ್ನಪ್ಪ ಗೌಡ, ಮಲ್ಲಿಕಾರ್ಜುನ ಹೊಸಪಾಳ್ಯ, ಪ್ರೊ. ಎಂ.ಎ. ಹೆಗಡೆ ಲಕ್ಷ್ಮೀ ಮಚ್ಚಿನ, ಡಾ. ಪಾದೇಕಲ್ಲು ವಿಷ್ಣು ಭಟ್ ಮತ್ತು ಡಾ. ಚೂಡಾಮಣಿ ನಂದಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ಮಾಣಿಲದ ಮೋಹನದಾಸ ಸ್ವಾಮೀಜಿ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಬ್ಲಾಸಂ ಫೆರ್ನಾಂಡಿಸ್, ಡಾ. ಚೂಡಾಮಣಿ ನಂದಗೋಪಾಲ್, ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಧನ್ಯವಾದವಿತ್ತರು. ಬಾರ್ಕೂರಿನ ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English