ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮರಳಿಗಾಗಿ ಹೋರಾಟ ತೀವ್ರಗೊಂಡಿದೆ. ಟಿಪ್ಪರ್ ಮಾಲೀಕರು ಜಿಲ್ಲೆಯಾದ್ಯಂತ ಹೋರಾಟ ಆರಂಭಿಸಿದ್ದು, ಅಕ್ಟೋಬರ್ 25 ರಿಂದ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭವಾಗಲಿದೆ.
ಮಳೆಗಾಲದಿಂದಲೇ ಮರಳುಗಾರಿಗೆ ಸಂಪೂರ್ಣ ಸ್ಥಗಿತಗೊಂಡಿದ್ದು, ಕಾರ್ಮಿಕರು ಮತ್ತು ಟಿಪ್ಪರ್ ಚಾಲಕರು ಬೀದಿಗೆ ಬಿದ್ದಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಬಂದು ಮರಳುಗಾರಿಕೆ ಆರಂಭಿಸುವ ಭರವಸೆ ಕೊಟ್ಟರೂ ಅಧಿಕಾರಿಗಳು ಅವಕಾಶ ನೀಡಿಲ್ಲ ಎನ್ನುವುದು ಇವರ ಆಕ್ರೋಶವಾಗಿದೆ.
ಹೋದಲ್ಲಿ ಬಂದಲ್ಲಿ ಉಡುಪಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಅಡ್ಡಗಟ್ಟಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮಳೆಗಾಲ ಆರಂಭವಾದಾಗಿನಿಂದ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಗೊಂಡಿದೆ. ಹಸಿರು ಪೀಠದ ವಿಚಾರಣೆ ನಡೆಯುತ್ತಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿಗಳು ಮರಳುಗಾರಿಕೆಯನ್ನು ಸಂಪೂರ್ಣ ನಿಷೇಧ ಮಾಡಿದ್ದಾರೆ. ಆದರೆ ಹಸಿರು ಪೀಠದ ಯಾವುದೇ ಆದೇಶ ಬಂದಿಲ್ಲ. ಕಾನೂನು ವ್ಯಾಪ್ತಿಯಲ್ಲೇ ಮರಳುಗಾರಿಕೆಗೆ ಅವಕಾಶ ನೀಡಿ ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.
ಸಮಸ್ಯೆ ಗಂಭೀರತೆ ಅರಿತ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಉಡುಪಿ ಜಿಲ್ಲೆಗೆ ಬಂದು ಕಾನೂನಿನ ಚೌಕಟ್ಟಿನೊಳಗೆ ಮರಳುಗಾರಿಕೆಗೆ ಅವಕಾಶ ನೀಡಲು ಆದೇಶಿಸಿದ್ದರು. ಸೆ. 25 ರಂದು ಉಡುಪಿಯ ಜನಪ್ರತಿನಿಧಿಗಳನ್ನು ಬೆಂಗಳೂರಿಗೆ ಕರೆಸಿಕೊಂಡು ವಿಶೇಷ ಸಭೆ ನಡೆಸಿ ಅಕ್ಟೋಬರ್ 15 ರಿಂದ ಮರಳುಗಾರಿಕೆ ಆರಂಭಿಸುವ ಅಭಯ ನೀಡಿದ್ದರು. ಆದೇಶ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಉಸ್ತುವಾರಿ ಸಚಿವೆ ಜಯಮಾಲಾಗೆ ವಹಿಸಿದ್ದರು. ಸ್ವತಃ ಸಿಎಂ ಹೇಳಿದರೂ ಆದೇಶ ಜಾರಿಯಾಗಿಲ್ಲ. ಮರಳು ತೆಗೆಯಲು ಜಿಲ್ಲಾಧಿಕಾರಿಗಳು ಅವಕಾಶ ನೀಡಿಲ್ಲ. ಹಸಿರು ಪೀಠದ ಸಂಭಾವ್ಯ ಆದೇಶದ ನೆಪವೊಡ್ಡಿ ಮರಳುಗಾರಿಕೆ ಸ್ಥಗಿತ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸಂಪೂರ್ಣ ಬಂದ್ ಆಗಿದೆ. ಕಳೆದ ಮೂರು ವರ್ಷಗಳಿಂದ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಕೆಲಸ ಅರಸಿ ವಲಸೆ ಬಂದಿರುವ ಕಾರ್ಮಿಕರು ಉದ್ಯೋಗ ಇಲ್ಲದೆ ವಾಪಾಸಾಗುತ್ತಿದ್ದಾರೆ. ಟಿಪ್ಪರ್ ಮಾಲೀಕರು ವಹಿವಾಟಿಲ್ಲದೆ ಸಂಚಾರ ಬಂದ್ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ರಸ್ತೆಯ ಪಕ್ಕದಲ್ಲೇ ವಾಹನ ಇಟ್ಟು ಧರಣಿ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೂ ನುಗ್ಗುವ ಯತ್ನವನ್ನು ಪೊಲೀಸ್ ಇಲಾಖೆ ಹಿಮ್ಮೆಟ್ಟಿಸಿದೆ. ಇದೀಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಅವಕಾಶವಾಗಿದ್ದು, ಲೂಟಿಕೋರರು ಮರಳಿನ ಬೆಲೆಯನ್ನು ಗಗನಕ್ಕೇರಿಸಿ black market ನಲ್ಲಿ ಮರಳು ಮಾರುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಅಕ್ರಮವಾಗಿ ಮರಳು ತರಿಸಲಾಗುತ್ತಿದೆ. ಸಿ.ಆರ್.ಝಡ್ ಕಾನೂನಿನ ತೊಡಕಿರುವ ಕಾರಣಕ್ಕೆ ಮರಳು ನಿಷೇಧ ಮಾಡಲಾಗಿದೆ. ಆದರೆ ಸಿಆರ್ಝಡ್ ವ್ಯಾಪ್ತಿಯಿಂದ ಹೊರಗೆ ಮರಳುಗಾರಿಕೆಗೆ ಅವಕಾಶ ನೀಡಿ ಅನ್ನೋದು ಜನಪ್ರತಿನಿಧಿಗಳ ಒತ್ತಾಯ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸದ ಕಾರಣ ಅ. 25 ರಿಂದ ರಾಜಕೀಯ ರಹಿತವಾದ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದೆ.
ಜಿಲ್ಲಾಡಳಿತ ಒಂಭತ್ತು ಮರಳು ದಿಣ್ಣೆಗಳನ್ನು ಗುರುತಿಸಿ ಸಮಸ್ಯೆಯಿಂದ ಬಚಾವಾಗಲು ಮುಂದಾಗಿದೆ. ಆದರೆ ಕಳೆದ ಬಾರಿಯಂತೆ 171 ಸ್ಥಳಗಳಲ್ಲಿ ಪರವಾನಗಿ ನೀಡಿ ಜಿಲ್ಲೆಯ ಸಾಂಪ್ರದಾಯಿಕ ಮರಳುಗಾರಿಕೆ ಉಳಿಸಬೇಕು ಮತ್ತು ಕಾರ್ಮಿಕರನ್ನು ರಕ್ಷಿಸಬೇಕು ಅನ್ನೋದು ಹೋರಾಟಗಾರರ ಒತ್ತಾಯ. ಜಿಲ್ಲೆಯಲ್ಲಿ ಮರಳಿಗಾಗಿ ಗಲಾಟೆ ತಾರಕಕ್ಕೇರಿದೆ. ಪ್ರತಿಭಟನೆ ತೀವ್ರತೆಯ ನಡುವೆ ಜಿಲ್ಲಾಧಿಕಾರಿಗಳು ಸಮಸ್ಯೆ ಪರಿಹಾರಕ್ಕಾಗಿ ಮೂರು ವಾರದ ಅವಕಾಶ ಕೇಳಿದ್ದಾರೆ. ಆದ್ರೆ ಸೂಕ್ತ ಪರಿಹಾರ ಸಿಗುತ್ತಾ ಅನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
Click this button or press Ctrl+G to toggle between Kannada and English