ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಡೆದಾಟ: ಚೈತ್ರಾ ಕುಂದಾಪುರ ಸಹಿತಾ ಏಳು ಮಂದಿ ಪೊಲೀಸರ ವಶಕ್ಕೆ

11:02 AM, Thursday, October 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

chaitra-kundapuraಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಪೂಜೆಯೊಂದಕ್ಕೆ ಸಂಬಂಧಪಟ್ಟಂತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಯೊಂದರ ನಾಯಕಿ ಚೈತ್ರಾ ಕುಂದಾಪುರ ತಂಡದ ನಡುವೆ ನಡೆದ ಘರ್ಷಣೆಯಿಂದ ಓರ್ವ ಗಾಯಗೊಂಡಿದ್ದು, ಚೈತ್ರಾ ಕುಂದಾಪುರ ಸಹಿತಾ ಆಕೆಯ ಬೆಂಬಲಿಗರೆನ್ನಲಾದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಎಂದು ಹೆಸರಿಸಲಾಗಿದೆ. ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದ ತಾರಕಕ್ಕೇರಿದ್ದು, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಪೂಜೆಯ ವಿಚಾರಕ್ಕೆ ಸಂಬಂಧಿಸಿ ಹಿಂದೂ ಪರ ಸಂಘಟನೆಗಳ ಎರಡು ಗುಂಪುಗಳ ನಡುವೆ ಇತ್ತೀಚೆಗೆ ವೈಮನಸ್ಸು ಏರ್ಪಟ್ಟಿತ್ತು. ಈ ವಿಚಾರದಲ್ಲಿ ಚೈತ್ರಾ ಕುಂದಾಪುರ ಮಠದ ಪರವಾಗಿ ಮಾತನಾಡುತ್ತಾ ದೇವಸ್ಥಾನದ ಸರ್ಪ ಸಂಸ್ಕಾರ ವಿಧಿಯ ಕುರಿತು ವಿವಾದಿತ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ ವಿರೋಧ ಚರ್ಚೆಗಳು ನಡೆದಿದ್ದವು.

ಇದೇ ವಿಚಾರವಾಗಿ ಗುರುಪ್ರಸಾದ್ ಪಂಜ ಹಾಗೂ ಚೈತ್ರಾ ನಡುವೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಿರಂತರ ವಾಗ್ವಾದ ನಡೆಯುತ್ತಿತ್ತು. ಬಳಿಕ ಇವರೊಳಗೆ ಈ ವಿಚಾರದಲ್ಲಿ ದೂರವಾಣಿ ಮೂಲಕ ಚರ್ಚೆಯಾಗಿ ಪರಸ್ಪರ ಸವಾಲು ಹಾಕುವ ಮಟ್ಟಕ್ಕೆ ತಲುಪಿದೆ. ಇದರ ಮುಂದುವರಿದ ಭಾಗವಾಗಿ ಚೈತ್ರಾ ಕುಂದಾಪುರ ಹಾಗೂ ತಂಡ ಬುಧವಾರ ಸಂಜೆ ಸುಬ್ರಹ್ಮಣ್ಯಕ್ಕೆ ಆಗಮಿಸಿದೆ.

ಸುಬ್ರಹ್ಮಣ್ಯ ಕಾಶಿಕಟ್ಟೆ ಎಂಬಲ್ಲಿ ಚೈತ್ರಾ ಮತ್ತು ಗುರುಪ್ರಸಾದ್ ಬೆಂಬಲಿಗರ ತಂಡವನ್ನು ಪರಸ್ಪರ ಸಂಧಿಸಿದ್ದು, ಇವರೊಳಗೆ ವಾಗ್ವಾದ ನಡೆದಿದೆ. ಇದು ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಚೈತ್ರಾ ಬೆಂಬಲಿಗ ತಂಡದ ಓರ್ವ ಕಬ್ಬಿಣದ ರಾಡ್‌ನಿಂದ ಗುರುಪ್ರಸಾದ್ ಮೇಲೆ ಹಲ್ಲೆ ನಡೆಸಿದನೆನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ದೇವಸ್ಥಾನ ಅರ್ಚಕರೊಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿ ಸಂಘ ಪರಿವಾರದ ನಾಯಕಿ ಚೈತ್ರಾ ಕುಂದಾಪುರ ಸಹಿತ ಏಳು ಮಂದಿಯನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ರಾತ್ರಿಯವರೆಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಯಾವುದೇ ದೂರು ಸ್ವೀಕಾರವಾಗಿಲ್ಲ. ಘಟನೆ ಕುರಿತು ಸತ್ಯಾಸತ್ಯತೆಯ ಮಾಹಿತಿ ಪಡೆದು ಮುಂದಿನ ಕ್ರಮ ಜರಗಿಸಲಾಗುವುದು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ತಂಡದ ಕೃತ್ಯವನ್ನು ಖಂಡಿಸಿ ತಡರಾತ್ರಿ ಸುಬ್ರಹ್ಮಣ್ಯದ ನಾಗರಿಕರು ಮೆರವಣಿಗೆ ನಡೆಸಿದ್ದಾರೆ. ಇದೇ ವೇಳೆ ಘಟನೆಯನ್ನು ಖಂಡಿಸಿ ಗುರುವಾರ ಸುಬ್ರಹ್ಮಣ್ಯ ಬಂದ್‌ಗೆ ನಗರದ ವರ್ತಕರು, ಕೆಲವು ಸಂಘಟನೆಗಳು ಕರೆ ನೀಡಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English