ಮಂಗಳೂರು: ದ.ಕ.ಜಿಲ್ಲೆಯ ಹೆದ್ದಾರಿಗಳು ವಾಹನ ಸಂಚಾರಕ್ಕೆ ದುಸ್ತರವಾಗಿವೆ. ಹೊಂಡಗಳೇ ತುಂಬಿರುವ ಸುರತ್ಕಲ್ನಿಂದ ನಂತೂರುವರೆಗಿನ ಹೆದ್ದಾರಿಯಲ್ಲಿ ಅಕ್ರಮವಾಗಿ ಸುಂಕ ಸಂಗ್ರಹಿಸುತ್ತಿರುವುದನ್ನು ತಡೆಯಲು ಸಂಸದರು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಮಂಗಳೂರು ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ ದೂರಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಮುಚ್ಚುತ್ತೇವೆ ಎಂದು ಪದೇ ಪದೇ ಹೇಳುತ್ತಾ ಬಂದಿರುವ ನಳಿನ್ ಇದನ್ನು ಮುಚ್ಚುವ ಪ್ರಯತ್ನ ಮಾಡಿಲ್ಲ. ಆದ್ದರಿಂದ ಅ.30ಕ್ಕೆ ಟೋಲ್ ಗೇಟ್ ಮುಚ್ಚದಿದ್ದಲ್ಲಿ ಜನತೆಯ ಬೆಂಬಲದೊಂದಿಗೆ ಅದನ್ನು ಎತ್ತಂಗಡಿ ಮಾಡುವ ಕಾರ್ಯಾಚರಣೆ ನಡೆಸುತ್ತೇವೆ ಎಂದು ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ ಎಚ್ಚರಿಕೆ ನೀಡಿದ್ದಾರೆ.
ಸುರತ್ಕಲ್ನಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಯ ಮೂರನೇ ದಿನವಾದ ಇಂದು ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಈ ಬಾರಿ ಟೋಲ್ ಗೇಟ್ ನವೀಕರಣಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡಕೂಡದು. ಅಲ್ಲದೆ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟವನ್ನು ಬಲಿಷ್ಠವಾಗಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭ ಟೋಲ್ ಗೇಟ್ ವಿರೋಧಿ ಸಮಿತಿಯ ಸುರತ್ಕಲ್ ಸಂಚಾಲಕ ಮುನೀರ್ ಕಾಟಿಪಳ್ಳ, ಮನಪಾ ಸದಸ್ಯರಾದ ಬಶೀರ್ ಅಹಮದ್, ರೇವತಿ ಪುತ್ರನ್, ದಯಾನಂದ ಶೆಟ್ಟಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಚರಣ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಸುರತ್ಕಲ್ ಟೋಲ್ ಗೇಟ್ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಮೂರನೇಯ ದಿನ ರಾತ್ರಿಯೂ ಮುಂದುವರೆದಿದೆ. ಈ ಮೂಲಕ ತಮ್ಮ ಬೇಡಿಕೆ ಈಡೇರುವವರೆಗೆ ನಾವು ಹೋರಾಟ ನಡೆಸುತ್ತೇವೆ ಎಂದು ಧರಣಿ ನಿರತರು ಎಚ್ಚರಿಕೆ ನೀಡಿದ್ದಾರೆ.
Click this button or press Ctrl+G to toggle between Kannada and English