ಕುಂದಾಪುರ: ಸದಾ ನಿದ್ದೆಯಲ್ಲಿಯೇ ಮುಳುಗಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಯಾರೂ ಕಾಣಿಸೋದೆಯಿಲ್ಲ. ಅದು ಸಿದ್ದರಾಮಯ್ಯ ತಪ್ಪು ಹೊರತು ಹಾಲಾಡಿಯವರದ್ದಲ್ಲ. ಈಗ ಸಿದ್ದರಾಮಯ್ಯ ನಿದ್ದೆಯಿಂದ ಎದ್ದಿದ್ದರೂ ಕೂಡ ಕಾಲ ಮಿಂಚಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಬೈಂದೂರಿನ ನಾಗೂರಿನಲ್ಲಿ ನಡೆದ ಲೋಕಸಭಾ ಉಪಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದು ಮಾತನಾಡುವ ವೇಳೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯ ಬಗ್ಗೆ ಏಕವಚನದಲ್ಲಿ ಮಾತನಾಡಿದ ಬಗ್ಗೆ ಕೋಟ ಬೈಂದೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸದನದಲ್ಲಿ ನಿದ್ರೆ ಮಾಡುವ ನಿಮಗೆ ಏನು ತಿಳಿಯುತ್ತಿಲ್ಲ. ನಿದ್ರೆ ಮಾಡುತ್ತಿದ್ದರೆ ಯಾರದ್ದಾದರೂ ಮುಖ ನೋಡುವುದು ಹೇಗೆ? ನಿದ್ರೆ ಮಾಡುವ ನಿದ್ರಾಮಯ್ಯಗೆ ಬಂದುಹೋದವರ ಬಗ್ಗೆ ಗೊತ್ತಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ಓರ್ವ ಗೌರವಸ್ಥ ಶಾಸಕ. ಅವರಿಗೆ ಏಕವಚನದಲ್ಲಿ ಕರೆದಿದ್ದು ತಪ್ಪು. ಇದು ಸಿದ್ದರಾಮಯ್ಯ ಅನಾಗರಿಕತೆ ತೋರಿಸುತ್ತಿದೆ. ಹಾಲಾಡಿ ಶ್ರೀನಿವಾಸ್ ಶೆಟ್ಟಿ ಐದು ಬಾರಿ ಶಾಸಕರಗಿದ್ದು ಪ್ರತಿ ಬಾರಿ ಅತ್ಯಧಿಕ ಮತಗಳಲ್ಲಿ ಗೆದ್ದಿರುವ ವ್ಯಕ್ತಿ ಹಾಲಾಡಿಯವರು ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದರು.
ಶತಮಾನದ ಹಿನ್ನೆಲೆಯಿರುವ ಕಾಂಗ್ರೆಸ್ ಪಕ್ಷಕ್ಕೆ ಇನ್ನು ಮುಂದೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ತನ್ನ ಚಿಹ್ನೆಯನ್ನು ಅಡವಿಡಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ತನ್ನ ಕೈಯನ್ನು ಜೆಡಿಎಸ್ ಗೆ ಅಡವಿಟ್ಟಿದೆ. ಈ ಹಿನ್ನೆಲೆ ಮೂಲ ಕಾಂಗ್ರೆಸ್ಸಿಗರಲ್ಲಿ ಭಯ ಶುರುವಾಗಿದೆ. ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಯೋಗ್ಯ ಎಂದಿದ್ದೆ. ಆದರೆ ಕಾರ್ಯಕ್ರಮದಲ್ಲಿ ಅವರೆ ನನ್ನನ್ನು ಹಸಿ ಸುಳ್ಳುಗಾರ ಎಂದರೆ ನಾನು ಯೋಗ್ಯ ಎಂದು ಅವರನ್ನು ಕರೆದಿದ್ದು ಸುಳ್ಳು ಎಂದಾಗಿದೆ. ಗೋಪಾಲ ಪೂಜಾರಿ ಯೋಗ್ಯನೇ ಅಥವಾ ಬೇರೆಯೇ ಅವರೇ ಪರಾಮರ್ಷಿಸಿಕೊಳ್ಳಲಿ ಎದು ತನ್ನ ಬಗೆಗಿನ ಹೇಳಿಕೆಗೆ ಕೋಟ ತಿರುಗೇಟು ನೀಡಿದ್ದಾರೆ.
Click this button or press Ctrl+G to toggle between Kannada and English