ಬೆಂಗಳೂರು: ಬಿಲ್ ಕೇಳಿದಕ್ಕೆ ಎಂಪೈರ್ ಹೊಟೇಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಡುಗೋಡಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಅಜಿತ್ ಹಾಗೂ ಆಂಥೋನಿ ಹಲ್ಲೆಗೊಳಗಾದ ಸಿಬ್ಬಂದಿಗಳು. ಕೋರಮಂಗಲ ಬಳಿ ವಾಸವಿರುವ ಶಂಕರಗೌಡ ಆನ್ ಲೈನ್ ಮೂಲಕ ಎಂಪೈರ್ ಹೋಟೆಲ್ನಲ್ಲಿ ಪುಡ್ ಆರ್ಡರ್ ಮಾಡಿದ್ದಾರೆ. ಇದನ್ನ ಡೆಲಿವರಿ ಕೊಡಲು ಡೆಲಿವರಿ ಬಾಯ್ ಅಜಿತ್ ಎಂಬುವವ ಶಂಕರೇಗೌಡ ಮನೆಗೆ ಆಗಮಿಸಿದ್ದಾನೆ. ಈ ವೇಳೆ ಪಾರ್ಟಿ ಮಾಡುತ್ತಿದ್ದ ಶಂಕರೇಗೌಡ ಹಾಗೂ ಸಹಚರರು ದಾಲ್ ಟೇಸ್ಟ್ ನೋಡಿ ಚೆನ್ನಾಗಿಲ್ಲ ಅಂತಾ ಹೇಳಿ ಅಜಿತ್ಗೆ ಬೇರೆ ದಾಲ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರಂತೆ.
ಅಜಿತ್ ವಾಪಸ್ ಹೋಗಿ ಬೇರೆ ದಾಲ್ ತಂದು 1050 ರೂಪಾಯಿ ಹಣ ಆಗಿದೆ ಎಂದು ಬಿಲ್ ಕೇಳಿದ್ದಾನೆ. ಇದರಿಂದ ಕೆರಳಿದ ಶಂಕರೇಗೌಡ ಹಾಗೂ ಸಹಚರರು ಅಜಿತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಜತೆ ಇದ್ದ ಮತ್ತೊಬ್ಬ ಸಿಬ್ಬಂದಿ ಅಂಥೋನಿಗೂ ಅವರು ಚಾಕುವಿನಿಂದ ಇರಿದಿದ್ದಾರಂತೆ.
ಘಟನೆ ನಡೆದ ತಕ್ಷಣ ಅಂಥೋನಿ ಎಂಪೈರ್ ಹೊಟೇಲ್ಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಸಿಬ್ಬಂದಿ ಹಾಗೂ ಪೊಲೀಸರು ಬಂದು ಖಾಸಗಿ ಆಸ್ಪತ್ರೆಗೆ ಇಬ್ಬರನ್ನ ದಾಖಲಿಸಿದ್ದಾರೆ. ಇಬ್ಬರ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಆಪರೇಷನ್ ಮಾಡಲಾಗಿದೆ.
ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಹಲ್ಲೆ ನಡೆಸಿದ್ದ 5 ಮಂದಿ ಆರೋಪಿಗಳಾದ ಶಂಕರೇಗೌಡ ,ಅರುಣ್ ಕುಮಾರ್, ವಿಶಾಲ್, ಮುತ್ತುರಾಜ್ ಹಾಗೂ 17 ವರ್ಷದ ಅಪ್ರಾಪ್ತನನ್ನು ಬಂಧಿಸಿ ಮಾರಣಾಂತಿಕ ಹಲ್ಲೆ ಸೆಕ್ಷನ್ 307ರ ಅಡಿ ಪ್ರಕರಣ ದಾಖಲಿಸಿದ್ದಾರೆ.
Click this button or press Ctrl+G to toggle between Kannada and English