ಮಂಗಳೂರು: ಮಂಗಳೂರಿನ ಸುರತ್ಕಲ್ ಎಂಐಟಿಕೆ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಧರಣಿಯಲ್ಲಿ ಭಾಗಿಯಾಗಿದ್ದ ಸಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅವರು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದ್ದಾರೆ.
ಮೊದಲು ಅವರ ಅನೈತಿಕ ರಾಜಕಾರಣದ ಕೂಸಾಗಿರುವ ಸುರತ್ಕಲ್ ಟೋಲ್ ಗೇಟ್ ಗೆ ಬೆಂಕಿಹಚ್ಚಲಿ. ಜನತೆಯ ಬದುಕಿನ ನೆಮ್ಮದಿಗೆ ಬೆಂಕಿ ಹಚ್ಚುವ ರಾಜಕಾರಣವನ್ನು ಇನ್ನಾದರು ಕೈಬಿಡಲಿ. ಇಲ್ಲದಿದ್ದಲ್ಲಿ ಈ ಬಾರಿ ನಳಿನ್ ರ ರಾಜಕೀಯ ಆಟಗಳಿಗೆ ಜನತೆ ಅಂತಿಮ ಮೊಳೆ ಹೊಡೆಯಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮಮತಾ ಗಟ್ಟಿ, ಅವಿಭಜಿತ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಬಿಜೆಪಿ ಸಂಸದರ ಅರ್ಹತೆಗೆ ಹಿಡಿದ ಕನ್ನಡಿ. ಮುಂದಿನ ಚುನಾವಣೆಯಲ್ಲಿ ಜನ ಇವರಿಗೆ ತಕ್ಕಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ವೈ ರಾಘವೇಂದ್ರ ರಾವ್, ಟಿ.ಎನ್. ರಮೇಶ್, ಪಡ್ರೆ ರಾಜೇಶ್ ಶೆಟ್ಟಿ, ಮನಪಾ ಸದಸ್ಯರಾದ ದಯಾನಂದ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ರೇವತಿ ಪುತ್ರನ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಧರಣಿಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English