ಮಂಗಳೂರು: ಸುರತ್ಕಲ್ ಟೋಲ್ಗೇಟ್ ಮುಚ್ಚಬೇಕು ಅಥವಾ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಗೊಳಿಸಬೇಕು ಹಾಗೂ ಟೋಲ್ಗೇಟ್ ಗುತ್ತಿಗೆ ನವೀಕರಣದ ವಿರುದ್ಧ ಏಳು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಟೋಲ್ಗೇಟ್ ವಿರೋಧಿ ಸಮಿತಿಯ ಸದಸ್ಯರೊಂದಿಗೆ ಸೋಮವಾರ ತುರ್ತು ಸಭೆ ನಡೆಸಿ ಸಮಸ್ಯೆಯನ್ನು ಆಲಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಉಪಸ್ಥಿತರಿದ್ದರು. ರಾಜ್ಯದ ಅಪರ ಕಾರ್ಯದರ್ಶಿಗಳ ಸಭೆಯಲ್ಲಿ ಟೋಲ್ಗೇಟ್ ವಿಲೀನಗೊಳಿಸುವ ಮಾತುಕತೆ ನಡೆದಿರುವುದನ್ನು ಒಪ್ಪಿಕೊಂಡರು. ಆದರೆ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಇನ್ನೂ ಯಾವ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನವೆಂಬರ್ 1 ರಂದು ದ.ಕ. ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ವೇಳೆ ಅವರೊಂದಿಗೆ ಟೋಲ್ ಗೇಟ್ ಸಮಸ್ಯೆಯನ್ನು ಪರಿಹರಿಸಲು ನವೆಂಬರ್ ಮೊದಲ ವಾರದಲ್ಲಿ ತುರ್ತು ಸಭೆಯನ್ನು ನಡೆಸಿ, ತೀರ್ಮಾನವನ್ನು ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದರು. ಅಲ್ಲದೆ ಬೆಂಗಳೂರಿನಲ್ಲಿಯೂ ಟೋಲ್ಗೇಟ್ ವಿರೋಧಿ ಹೋರಾಟಗಾರರೊಂದಿಗೆ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.
ಕೂಳೂರು ಹಳೆಯ ಸೇತುವೆಯನ್ನು ಕಾಮಗಾರಿ ಸಂದರ್ಭ ಮುಚ್ಚದೆ ಇಲ್ಲಿನ ಜನತೆಯ, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಗುವುದು. ಇದಕ್ಕಾಗಿ ಉಪಸಮಿತಿ ನೇಮಿಸಲಾಗುವುದು ಎಂದರು.
ಈ ವೇಳೆ ಸುರತ್ಕಲ್ ಟೋಲ್ಗೇಟ್ ಸಮಿತಿಯ ಸದಸ್ಯರು ಮಾತನಾಡಿ, ತಮ್ಮ ಬೇಡಿಕೆ ಈಡೇರುವವರೆಗೆ ನಮ್ಮ ಧರಣಿ ಕೈಬಿಡುವುದಿಲ್ಲ. ಟೋಲ್ ಗೇಟ್ ಮುಚ್ಚುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
Click this button or press Ctrl+G to toggle between Kannada and English