ಮೈಸೂರು: ನಾಲ್ವರು ದರೋಡೆಕೋರರನ್ನು ಬಂಧಿಸಿ, ಅವರಿಂದ ವಿದೇಶಿ ಕರೆನ್ಸಿ ಸೇರಿದಂತೆ 8.50 ಲಕ್ಷ ರೂ. ನಗದನ್ನು ವಿಜಯನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ನಗರ ತಾಲೂಕು ಮಿರ್ಲೆ ಗ್ರಾಮದ ಶ್ರೀಧರ್ (28), ಕೂರ್ಗಳ್ಳಿ ಗ್ರಾಮದ ನಟೇಶ್ (24), ಬೆಂಗಳೂರಿನ ವಿನಾಯಕ ಲೇಔಟ್‍ನ ಪ್ರಸಾದ್ (24), ಬೆಂಗಳೂರಿನ ಅಮೃತಹಳ್ಳಿಯ ಭರತ್‍ಕುಮಾರ್ (20) ಬಂಧಿತ ಆರೋಪಿಗಳು.
ಶಿವರಾಂಪೇಟೆ ರಸ್ತೆಯಲ್ಲಿರುವ ಫಾರಿನ್ ಕರೆನ್ಸಿ ಎಕ್ಸ್ಚೇಂಜ್ ಆಫೀಸ್ ಮಾಲೀಕ ಅರುಣ್ ಕುಮಾರ್ ಎಂಬುವರು ಸೆ.22ರಂದು ರಾತ್ರಿ ತಮ್ಮ ಕಚೇರಿಗೆ ಬೀಗ ಹಾಕಿಕೊಂಡು ವಿಜಯನಗರದಲ್ಲಿರುವ ತಮ್ಮ ಮನೆಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಆಗ ಅವರ ಮನೆ ಬಳಿ ಮೂರು ಮಂದಿ ಅಡ್ಡಗಟ್ಟಿ ಅವರ ಸ್ಕೂಟರನ್ನು ಕಿತ್ತುಕೊಂಡು ಹೋಗಿದ್ದರು. ಅಲ್ಲದೇ ಸ್ಕೂಟರ್ ಡಿಕ್ಕಿಯೊಳಗಿದ್ದ ಹಣ ಹಾಗೂ ವಿದೇಶಿ ಕರೆನ್ಸಿ ಕಸಿದುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಅರುಣ್ ಕುಮಾರ್ ದೂರು ನೀಡಿದ್ದರು. ಕೂರ್ಗಳ್ಳಿ ಬಸ್ ನಿಲ್ದಾಣ ಬಳಿ ಶ್ರೀಧರ್ ಹಾಗೂ ನಟೇಶ್‍ನನ್ನು ಜೂಪಿಟರ್ ಸ್ಕೂಟರ್ ಸಮೇತ ಹಿಡಿದು ವಿಚಾರಣೆ ಮಾಡಿದಾಗ, ಆರೋಪಿ ಶ್ರೀಧರ ಈ ಹಿಂದೆ ಮೈಸೂರಿನ ಅಶೋಕ ರಸ್ತೆಯಲ್ಲಿರುವ ಕರೆನ್ಸಿ ಎಕ್ಸ್ಚೇಂಜ್ ಆಫೀಸ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಕರೆನ್ಸಿ ಎಕ್ಸ್ಚೇಂಜ್ ಮಾಡುವ ಸಲುವಾಗಿ ಆತ ಮತ್ತು ಬೆಂಗಳೂರಿನ ಪ್ರಸಾದ್ ಎಂಬುವನು ಶಿವರಾಂಪೇಟೆಯಲ್ಲಿರುವ ಅರುಣ್‍ಕುಮಾರ್ ಅವರ ಕರೆನ್ಸಿ ಎಕ್ಸ್ಚೇಂಜ್ ಆಫೀಸ್‍ಗೆ ಆಗ್ಗಾಗ್ಗೆ ಬರುತ್ತಿದ್ದರು. ಅಲ್ಲದೆ, ಅರುಣ್‍ಕುಮಾರ್ ಅವರ ವ್ಯವಹಾರವನ್ನು ನೋಡಿದ್ದರು ಎನ್ನಲಾಗಿದೆ.
ಹೀಗಾಗಿ ಶ್ರೀಧರ ತನ್ನ ಇತರ ಸ್ನೇಹಿತರ ಜೊತೆ ಸೇರಿಕೊಂಡು ಹಣ ದೋಚಲು ಸ್ಕೆಚ್ ಹಾಕಿ ಈ ಕೃತ್ಯ ಎಸಗಿದ್ದರು. ಈಗ ನಾಲ್ವರೂ ಕಂಬಿ ಹಿಂದೆ ಬಿದ್ದಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 3.50 ಲಕ್ಷ ರೂ. ನಗದು, 3.31 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ, ಟಿ.ವಿ.ಎಸ್. ಜ್ಯೂಪಿಟರ್ ಸ್ಕೂಟರ್ ಹಾಗೂ ದರೋಡೆ ಹಣದಿಂದ ಖರೀದಿಸಿದ್ದ ಒಂದು ಸೆಕೆಂಡ್ ಹ್ಯಾಂಡ್ ಕಾರನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ರೂ. 8.50 ಲಕ್ಷ ರೂ. ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Click this button or press Ctrl+G to toggle between Kannada and English