ಅಂತಾರಾಷ್ಟ್ರೀಯ ಹೋಲಿ ಕುರಾನ್​ ಅವಾರ್ಡ್​ ಸ್ಪರ್ಧೆಗೆ ಭಾರತದಿಂದ ಸಚಿವ ಖಾದರ್​​​ ಪುತ್ರಿ ಆಯ್ಕೆ!

11:35 AM, Thursday, November 1st, 2018
Share
1 Star2 Stars3 Stars4 Stars5 Stars
(No Ratings Yet)
Loading...

u-t-khaderಮಂಗಳೂರು: ನವೆಂಬರ್ 4 ರಿಂದ 16 ರ ತನಕ ದುಬೈಯಲ್ಲಿ ನಡೆಯಲಿರುವ ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಹೆಸರಿನ “ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಅವಾರ್ಡ್” ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ಸಚಿವ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.

ಕುರಾನ್ ಸ್ಪರ್ಧೆಯು ದುಬೈಯ ಅಲ್ ಮಮ್ಝಾರ್ ಸೈಂಟಿಫಿಕ್ ಆಂಡ್ ಕಲ್ಚರಲ್ ಅಸೋಸಿಯೇಶನ್ನಲ್ಲಿ ನಡೆಯಲಿದೆ. ಸ್ಪರ್ಧೆಗೆ ಪೂರ್ವಭಾವಿಯಾಗಿ ಆರು ತಿಂಗಳ ಕಾಲ ನಡೆದ ವಿವಿಧ ಪ್ರಕ್ರಿಯೆಗಳ ಬಳಿಕ ವಿಶ್ವದ 63 ಸ್ಪರ್ಧಾಳುಗಳ ಜೊತೆಗೆ ಭಾರತದಿಂದ ಹವ್ವಾ ಅವರನ್ನು ಯುಎಇ ಸರ್ಕಾರ ಆಯ್ಕೆ ಮಾಡಿದೆ. ಹವ್ವಾ ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ.

ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಅವರು ಯುಎಇಯ ಸ್ಥಾಪಕ ಅಧ್ಯಕ್ಷ ಶೈಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಪತ್ನಿಯಾಗಿದ್ದು, “ಮದರ್ ಆಫ್ ಯುಎಇ” ಎಂಬ ಖ್ಯಾತಿ ಅವರಿಗಿದೆ. ಅವರ ಹೆಸರಲ್ಲಿ 2016 ನವಂಬರ್ನಲ್ಲಿ ಪ್ರಾರಂಭವಾದ ಹೋಲಿ ಕುರಾನ್ ಅವಾರ್ಡ್ಗೆ ವಿಶ್ವದ ನಾನಾ ದೇಶಗಳ ಕುರಾನ್ ಕಂಠ ಪಾಠ ಮಾಡಿರುವ ಮಹಿಳಾ ಸ್ಪರ್ಧಿಗಳು ಭಾಗವಹಿಸುತ್ತಾರೆ. 25 ವರ್ಷದೊಳಗಿನ ಮಹಿಳೆಯರಿಗೆ ಇದರಲ್ಲಿ ಅವಕಾಶವಿದೆ. ಪ್ರಥಮ ಬಹುಮಾನವಾಗಿ ಎರಡೂವರೆ ಲಕ್ಷ ದಿರ್ಹಮ್ (ಸುಮಾರು 50 ಲಕ್ಷ ರೂ.) ಮತ್ತು ಹೋಲಿ ಕುರಾನ್ ಪ್ರಶಸ್ತಿಯನ್ನು ಯುಎಇ ಸರ್ಕಾರ ನೀಡುತ್ತದೆ.

ಈ ವರ್ಷ 3ನೇ ಎಡಿಶನ್ ಆಗಿದ್ದು, ಸುಮಾರು 63 ರಿಂದ 70 ರಾಷ್ಟ್ರಗಳ ಸ್ಪರ್ಧಾಳುಗಳು ಈಗಾಗಲೇ ಆಯ್ಕೆಯಾಗಿದ್ದಾರೆ. ಈ ಪೈಕಿ ಭಾರತದಿಂದ ಸಚಿವ ಯು.ಟಿ.ಖಾದರ್ ಮತ್ತು ಲಾಮಿಸ್ ದಂಪತಿ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ. ಹವ್ವಾ ನಸೀಮಾ ಹಾಗೂ ತಂದೆ ಯು.ಟಿ.ಖಾದರ್ ಮತ್ತು ತಾಯಿ ಲಾಮಿಸ್ ದಂಪತಿಗೆ ಈಗಾಗಲೇ ಯುಎಇ ಸರ್ಕಾರ ವೀಸಾ ಹಾಗೂ ವಿಮಾನ ಟಿಕೆಟ್ ಕಳುಹಿಸಿಕೊಟ್ಟಿದ್ದು, ನವಂಬರ್ 3ರ ಶನಿವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಎಮಿರೇಟ್ಸ್ ವಿಮಾನದಲ್ಲಿ ಹೊರಡಲಿದ್ದಾರೆ. ಅಲ್ಲಿನ ತಂಗುವ ವ್ಯವಸ್ಥೆ, ಊಟೋಪಚಾರ ಹಾಗೂ ಇನ್ನಿತರ ಖರ್ಚನ್ನು ಯುಎಇ ಸರ್ಕಾರದ ರಾಜ ಮನೆತನ ಭರಿಸಲಿದೆ.

ಹೋಲಿ ಕುರಾನ್ ಅವಾರ್ಡ್ ಕಾರ್ಯಕ್ರಮವನ್ನು ಯುಎಇ ಉಪಾಧ್ಯಕ್ಷರು ಹಾಗೂ ಪ್ರಧಾನಮಂತ್ರಿ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಪ್ರಾಯೋಜಿಸುವರು. ಪುರುಷರ ಅಂತಾರಾಷ್ಟ್ರೀಯ ಹೋಲಿ ಕುರಾನ್ ಸ್ಪರ್ಧೆಯು ರಂಜಾನ್ ತಿಂಗಳಲ್ಲಿ ಕಳೆದ 23 ವರ್ಷಗಳಿಂದ ದುಬೈಯಲ್ಲಿ ನಡೆಯುತ್ತಿದೆ. ಮಹಿಳೆಯರ ಸ್ಪರ್ಧೆ ಕಳೆದ 2 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಇದು 3 ನೇ ಎಡಿಶನ್.

ಕೆಲ ವರ್ಷಗಳ ಹಿಂದೆ ಯು.ಟಿ.ಖಾದರ್ ದಂಪತಿ ಮೆಕ್ಕಾ ಯಾತ್ರೆ ತೆರಳಿದ್ದರು. ಆವಾಗ ಸಣ್ಣ ಹುಡುಗಿಯಾಗಿದ್ದ ಹವ್ವಾ ನಸೀಮಾ ಮೆಕ್ಕಾದಲ್ಲಿ ಕಅಬಾ ಆರಾಧನಾಲಯ ಸುತ್ತಾಟದ ವೇಳೆ ಜನಜಂಗುಳಿ ಮಧ್ಯೆ ಪೋಷಕರ ಕೈತಪ್ಪಿ ಕಣ್ಮರೆಯಾದರು. ಇಡೀ ದಿನ ಹುಡುಕಾಡಿದರೂ ಸಿಗದೇ ಇದ್ದಾಗ ಯು.ಟಿ.ಖಾದರ್ ದಂಪತಿ ಕಅಬಾಲಯದಲ್ಲಿ ಪ್ರಾರ್ಥಿಸುತ್ತಾ ಕಣ್ಮರೆಯಾದ ಮಗಳು ಸಿಕ್ಕರೆ ಆಕೆಗೆ ಕುರಾನ್ ಕಂಠ ಪಾಠ ಮಾಡಿಸುವ ಹರಕೆ ಹೊತ್ತರು. ಇದರ ಬಳಿಕ ಒಬ್ಬ ವಯಸ್ಕರೊಂದಿಗೆ ಹವ್ವಾ ಸಿಕ್ಕಿದ್ದರು. ಈ ಘಟನೆ ನಡೆದ ನಂತರ ಹವ್ವಾ ನಸೀಮಾ ಅವರು ತಮ್ಮ ಲೌಕಿಕ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ 3 ವರ್ಷಗಳ ಕುರಾನ್ ಕಂಠ ಪಾಠಕ್ಕಾಗಿ ಕಾಸರಗೋಡಿನ ಅಡ್ಕತ್ತಬೈಲ್ ಹಾಗೂ ದೇರಳಕಟ್ಟೆಯ ಮದ್ರಸುತ್ತಿಬಿಯಾನ್ ಧಾರ್ಮಿಕ ವಿದ್ಯಾ ಸಂಸ್ಥೆಗೆ ಸೇರಿದರು. ಅಲ್ಲಿ ವಿದ್ಯೆ ಕಲಿತು ಹಾಫಿಝಾ ಬಿರುದು ದಾರಿಯಾಗಿ ಹೊರಬಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English