ಮಂಗಳೂರು: ಕನ್ನಡ ರಾಜ್ಯೋತ್ಸವ ಈ ಶುಭ ಸಂದರ್ಭದಲ್ಲಿ ಸೇರಿರುವ ಕನ್ನಡಾಭಿಮಾನಿಗಳಿಗೆ, ಗಣ್ಯರಿಗೆ, ಸಾರ್ವಜನಿಕ ಬಂಧುಗಳಿಗೆ, ಅಧಿಕಾರಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಮಾಧ್ಯಮ ಸ್ನೇಹಿತರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳುತ್ತಾ ಯು.ಟಿ.ಖಾದರ್ ತಮ್ಮ ಭಾಷಣವನ್ನು ಪ್ರಾರಂಭಿಸಿದರು.
ಎಂಟು ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಕನ್ನಡ ನಾಡಿನಲ್ಲಿ ಕುವೆಂಪು ಅವರ ‘ಕನ್ನಡ ನಾಡಿಗೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂಬ ಕರೆಗೆ ಓಗೊಟ್ಟು ನಾವೆಷ್ಟು ಮಂದಿ ಕನ್ನಡಕ್ಕಾಗಿ ಕೈ ಎತ್ತಿದ್ದೇವೆ? ಕನ್ನಡಕ್ಕಾಗಿ ಕೊರಳೆತ್ತಿದ್ದೇವೆ? ವರ್ಷಕ್ಕೊಮ್ಮೆ ಬರುವ ಕನ್ನಡ ರಾಜ್ಯೋತ್ಸವದ ಒಂದು ದಿನ ಕನ್ನಡವನ್ನು ನೆನಪಿಸಿದರೆ ಸಾಕೇ? ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದರು.
ದಕ್ಷಿಣ ಕರ್ನಾಟಕದ ಏಕೀಕರಣದ ಮೊದಲು ಕೂಗು ಮೊಳಗಿದ್ದು ಕಾಸರಗೋಡಿನಲ್ಲಿ. ಆದರೆ ಏಕೀಕರಣವಾಗುವಾಗ ಕಾಸರಗೋಡು ನಮ್ಮ ಕೈ ತಪ್ಪಿ ಹೋಯಿತು. ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕನ್ನಡದ ಅವಿಭಾಜ್ಯ ಅಂಗವಾಗಿದ್ದ ಕಾಸರಗೋಡನ್ನು ನಾವು ಕಳೆದುಕೊಂಡದ್ದು ಅತ್ಯಂತ ವಿಷಾದನೀಯ ಎಂದು ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಡಾ.ಭರತ್ ಶೆಟ್ಟಿ, ಮೇಯರ್ ಕೆ.ಭಾಸ್ಕರ್ ಮೊಯ್ಲಿ, ಉಪಮೇಯರ್ ಕೆ.ಮುಹಮ್ಮದ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಎಸ್ಪಿರವಿಕಾಂತೇ ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ನಡೆಯಿತು. ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
Click this button or press Ctrl+G to toggle between Kannada and English