ಬೆಂಗಳೂರು : ಹೊಸೂರು ರಸ್ತೆಯ ಗೆಸ್ಟ್ ಲೈನ್ ರೆಸಾರ್ಟ್‌ನಲ್ಲಿ ನಡೆದ ಚಿಂತನ-ಮಂಥನ ಸಭೆಯಲ್ಲಿ ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ದಯಮಾಡಿ ಬಂಡಾಯ ರಾಜಕೀಯ ಮಾಡಬೇಡಿ. ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಎರಡೂ ಕೈಮುಗಿದು ಮನವಿ ಮಾಡಿಕೊಂಡ ಘಟನೆ ಶುಕ್ರವಾರ ನಡೆಯಿತು.
ಗೆಸ್ಟ್ ಲೈನ್ ರೆಸಾರ್ಟ್‌ನಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚಿಂತನ-ಮಂಥನ ಸಭೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ ಗಡ್ಕರಿ, ರಾಜ್ಯದಲ್ಲಿ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಹಾಗಾಗಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಬೇಡಿ. ಯಡಿಯೂರಪ್ಪ ಮೊದಲು ಆರೋಪ ಮುಕ್ತರಾಗಲಿ. ಆ ಬಳಿಕವೇ ನಾಯಕತ್ವ ಬದಲಾವಣೆ ಪ್ರಶ್ನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ರಾಜ್ಯ ರಾಜಕಾರಣದಲ್ಲಿನ ಭ್ರಷ್ಟಾಚಾರದಿಂದಾಗಿ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಧಕ್ಕೆಯಾಗಿದೆ. ಆ ನೆಲೆಯಲ್ಲಿ ನಾವು ಕರ್ನಾಟಕದಲ್ಲಿ ಉತ್ತಮ ಆಡಳಿತದ ನಿರೀಕ್ಷಿಸಿದ್ದೇವು. ಆದರೆ ಆ ನಿರೀಕ್ಷೆಗಳೆಲ್ಲ ಹುಸಿಯಾಗಿದೆ. ಇನ್ನು ಮುಂದಾದರೂ ಜನರ ಭಾವನೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಲು ಗಡ್ಕರಿ ಬಿಜೆಪಿ ಶಾಸಕರಿಗೆ ಸಲಹೆ ನೀಡಿದ್ದಾರೆ.
ಅಲ್ಲದೇ ಎರಡು ದಿನಗಳ ಕಾಲ ನಡೆಯಬೇಕಿದ್ದ ಚಿಂತನ ಮಂಥನ ಸಭೆ ಕೇವಲ ಒಂದೇ ದಿನಕ್ಕೆ ಮೊಟಕುಗೊಂಡಿದೆ. ಯಡಿಯೂರಪ್ಪ ಬೆಂಬಲಿಗರ ಬಹಿಷ್ಕಾರ ಭೀತಿಯಿಂದ ಚಿಂತನ-ಮಂಥನ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಮುಂದಿನ ವಾರ ದೆಹಲಿಗೆ ಬನ್ನಿ ಅಲ್ಲಿಯೇ ಎಲ್ಲವನ್ನೂ ಚರ್ಚಿಸೋಣ’…ಹೀಗೆಂದು ನಿತಿನ್ ಗಡ್ಕರಿಯವರು ಹೇಳಿ ದೆಹಲಿಗೆ ವಾಪಸ್ ಆಗಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಮುಕ್ತಾಯವಾದ ನಂತರ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಚಿಂತನ ಮಂಥನ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಗಡ್ಕರಿ, ಡಿ.ವಿ.ಸದಾನಂದ ಗೌಡರ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಹಾಗೆಯೇ ಯಡಿಯೂರಪ್ಪನವರನ್ನು ನಿರ್ಲಕ್ಷಿಸುವ ಮಾತಿಲ್ಲ. ಯಡಿಯೂರಪ್ಪ ಬಿಜೆಪಿ ಪಕ್ಷದ ಜನಪ್ರಿಯ ನಾಯಕ. ಅವರಿಗೆ ಖಂಡಿತವಾಗಿಯೂ ಪಕ್ಷದಲ್ಲಿ ನ್ಯಾಯ ಸಿಗುತ್ತದೆ. ಅದೇ ರೀತಿ ಅವರಿಗೆ ಶೀಘ್ರದಲ್ಲೇ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
Click this button or press Ctrl+G to toggle between Kannada and English