ಮಂಗಳೂರು: ರಫೆಲ್ ಹಗರಣವನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರವು ಸಿಬಿಐನ ಮುಖ್ಯಸ್ಥರನ್ನು ರಾತ್ರೋರಾತ್ರಿ ಅನಿರ್ಧಿಷ್ಟಾವಧಿ ರಜೆ ನೀಡಿ ಕಳುಹಿಸಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಕಿಡಿಕಾರಿದ್ದಾರೆ.
ನಗರಲಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ಡೈರೆಕ್ಟರ್ನ್ನು ಯಾವುದೇ ಕಾರಣವಿಲ್ಲದೆ ಅನಿರ್ಧಿಷ್ಟಾವಧಿ ರಜೆಗೆ ಕಳುಹಿಸಿರುವುದರ ಬಗ್ಗೆ ದೇಶದ ಜನತೆಗೆ ಕೇಂದ್ರ ಸರ್ಕಾರ ಉತ್ತರಿಸಬೇಕು. ಸಿಬಿಐ ಮುಖ್ಯಸ್ಥರನ್ನು ಯಾಕಾಗಿ ರಜೆಗೆ ಕಳುಹಿಸಿದ್ದಾರೆ? ಅದರ ಉದ್ದೇಶವೇನು? ರಾತ್ರಿ ಎರಡು ಗಂಟೆಗೆ ಪ್ರಧಾನಮಂತ್ರಿ ಕಚೇರಿಯಿಂದ ಆದೇಶ ಬರಲು ಕಾರಣವೇನು? ಎಂದು ಜನತೆಗೆ ತಿಳಿಯಪಡಿಸಬೇಕು ಎಂದು ಒತ್ತಾಯಿಸಿದರು.
ಸಿಬಿಐ ಮುಖ್ಯಸ್ಥರನ್ನು ಅನಿರ್ದಿಷ್ಟವಾಗಿ ರಜೆಗೆ ಕಳುಹಿಸಿರುವ ಹಿಂದೆ ರಫೇಲ್ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನವಿದೆ .ಈ ಸಿಬಿಐ ಅಧಿಕಾರಿ ರಫೇಲ್ ಡೀಲ್ ಬಗ್ಗೆ ಮಾಹಿತಿಯನ್ನು ಕೇಳಿದ್ದರು. ಮರುದಿನ ಬೆಳಗ್ಗೆ ಅದರ ಮಾಹಿತಿ ಸಿಗುತ್ತಿತ್ತು. ಇದನ್ನು ಮುಚ್ಚಿಹಾಕಲು ಪ್ರಧಾನಮಂತ್ರಿ ಕಚೇರಿ ಈ ಬದಲಾವಣೆ ಮಾಡಿದೆ ಎಂದು ಅವರು ಆರೋಪಿಸಿದರು.
ದೇಶದ ಪ್ರಧಾನಿ ಕೇವಲ ರೇಡಿಯೋದಲ್ಲಿ ಮನ್ ಕಿ ಬಾತ್ ಮೂಲಕ ಮಾತ್ರ ಮಾತನಾಡುತ್ತಾರೆ. ಆದರೆ ಅವರು ಪತ್ರಕರ್ತರೆದುರು ಮಾತನಾಡುತ್ತಿಲ್ಲ. ಅವರಿಗೆ ಅಂತಹ ಧೈರ್ಯವೂ ಇಲ್ಲ ಎಂದು ಟೀಕಿಸಿದರು.
Click this button or press Ctrl+G to toggle between Kannada and English