ಹಾಸನ: ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧವಿದ್ದೇವೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರ ಅಷ್ಟೇ ಅಲ್ಲ, ಉಳಿದ ನಾಲ್ಕು ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯ ಸಿಗಲಿದೆ. ಚುನಾವಣಾ ಕಣಕ್ಕೆ ಬರುವ ಬಗ್ಗೆ ಮಾತುಕತೆ ಆಗಿಲ್ಲ. ಮುಂದೆ ಏನು ಆಗುತ್ತೋ ನನಗೆ ಗೊತ್ತಿಲ್ಲ. ನಾನು ಕೂಡ ರಾಜಕೀಯ ಪ್ರವೇಶ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಮಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾನೆ. ಅದಕ್ಕಾಗಿ ನಿಖಿಲ್ ರಾಜಕೀಯಕ್ಕೆ ಬರಬೇಕೆಂಬ ಆಸೆ ಇದೆ. ಅವನು ಏನೇ ಒಳ್ಳೆ ಕಾರ್ಯ ಮಾಡಿದರು ನನ್ನ ಆಶೀರ್ವಾದ ಇದ್ದೇ ಇರುತ್ತೆ ಎಂದರು.
ನಿಖಿಲ್ ಹಾಗೂ ಪ್ರಜ್ವಲ್ ಇವರಿಬ್ಬರ ನಡುವೆ ಯಾರಿಗೆ ದೇವರ ಆಶೀರ್ವಾದ ಮತ್ತು ಜನರ ಬೆಂಬಲ ಇರುತ್ತೋ ಅವರು ಗೆಲ್ಲುತ್ತಾರೆ. ರೈತರಿಗೆ ಬ್ಯಾಂಕ್ನವರು ಕಿರುಕುಳ ನೀಡುತ್ತಿರುವುದನ್ನ ಸಿಎಂ ಆದಷ್ಟು ಬೇಗ ಸರಿಪಡಿಸಲಿದ್ದಾರೆ. ರೈತರ ಸಂಕಷ್ಟವನ್ನ ಬಗೆಹರಿಸು ಅಂತ ಪ್ರಾರ್ಥಿಸಿದ್ದೇನೆ. ಜೊತೆಗೆ ನಾಡಿಗೆ ಸುಖ ಸಮೃದ್ಧಿ ದೊರಕಲಿ ಅಂತ ಬೇಡಿದ್ದೇನೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು.
ಪ್ರತಿವರ್ಷ ಬರುವ ಹಾಗೆ ಈ ವರ್ಷವೂ ಕೂಡ ನಾನು ಹಾಸನಾಂಬೆ ದರ್ಶನಕ್ಕೆ ಬಂದಿದ್ದೇನೆ. ಈ ದೇವರ ಮೇಲೆ ನನಗೆ ಇರುವ ಅಪಾರ ನಂಬಿಕೆ. ಆ ಕಾರಣಕ್ಕಾಗಿ ಒಂದು ವರ್ಷವೂ ಕೂಡ ನಾನು ತಪ್ಪಿಸದೆ ದೇವರ ದರ್ಶನ ಪಡೆಯುತ್ತೇನೆ. ದೇವಿಯ ಕೃಪೆಯಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಇನ್ನೂ ಹೆಚ್ಚಿನ ಶಕ್ತಿ ಕೊಟ್ಟು ಅದನ್ನು ಉಳಿಸಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
Click this button or press Ctrl+G to toggle between Kannada and English