ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಮರಳು ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಜನಪರ ಮರಳು ನೀತಿಗಾಗಿ ಆಗ್ರಹಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(CWFI) ನೇತ್ರತ್ವದಲ್ಲಿ ನಗರದಲ್ಲಿಂದು ಮಂಗಳವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಟ್ಟಡ ಕಾರ್ಮಿಕರು, ಜನಪರ ಮರಳು ನೀತಿ ಜಾರಿಯಾಗಲಿ,ಅಕ್ರಮ ಮರಳು ಸಾಗಾಟ ನಿಲ್ಲಲ್ಲೇಬೇಕು, ಮರಳು ಸಮಸ್ಯೆ ಕೂಡಲೇ ಪರಿಹರಿಸಿರಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ CITU ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡುತ್ತಾ, CRZ 1 ಮತ್ತು CRZ 2 ರ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಕಾನೂನಿನ ತೊಡಕು ಇದ್ದು, ಈ ಬಗ್ಗೆ ರಾಷ್ಟ್ರೀಯ ಹಸಿರು ಪೀಠದಲ್ಲಿ ಇತ್ಯರ್ಥವಾಗಬೇಕಾಗಿದೆ. ವಿಪರ್ಯಾಸವೆಂದರೆ ಕಳೆದ 18 ತಿಂಗಳಿನಿಂದ ಹಸಿರು ಪೀಠಕ್ಕೆ ನ್ಯಾಯಾಧೀಶರ ನೇಮಕ ಮಾಡದೆ ಕೇಂದ್ರದ ಬಿಜೆಪಿ ಸರಕಾರ ಕರಾವಳಿ ಜನತೆಯ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ವಾಸ್ತವತೆ ಹೀಗಿರುವಾಗ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯ ಜನಪ್ರತಿನಿಧಿಗಳು ಭಜನೆ ಮಾಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷರೂ, CITU ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ,ಕರಾವಳಿ ಜಿಲ್ಲೆಯಲ್ಲಿ ಉದ್ಭವಿಸಿದ ಕೃತಕ ಮರಳು ಸಮಸ್ಯೆಯಿಂದಾಗಿ ಕಟ್ಟಡ ನಿರ್ಮಾಣ ಉದ್ಯಮವು ತೀವ್ರ ಸಂಕಷ್ಟಕ್ಕೀಡಾಗಿದ್ದು, ಕಟ್ಟಡ ಕಾರ್ಮಿಕರ ಬವಣೆ ಹೇಳತೀರದಾಗಿದೆ. ಜೊತೆಗೆ ಜನಸಾಮಾನ್ಯರೂ ಕೂಡ ಸಮಸ್ಯೆಗೊಳಗಾಗಿದ್ದಾರೆ. ಒಂದು ಕಡೆ ಕ್ರತಕ ಮರಳು ಸಮಸ್ಯೆ, ಮತ್ತೊಂದು ಕಡೆ ಅಕ್ರಮ ಮರಳುಗಾರಿಕೆ ನಡೆಸಿ ವಿಪರೀತ ದರ ನಿಗದಿಪಡಿಸಿ ಜನರನ್ನು ಸುಲಿಗೆ ಮಾಡುತ್ತಿರುವುದು, ಕೇರಳ ಸೇರಿದಂತೆ ಹೊರಜಿಲ್ಲೆಗಳಿಗೆ ಯಥೇಚ್ಚವಾಗಿ ಮರಳು ಸಾಗಾಟ ನಡೆಯುತ್ತಿರುವುದು ಜಿಲ್ಲಾಡಳಿತ ಹಾಗೂ ಸರಕಾರವೇ ಇಲ್ಲವೆಂಬಂತೆ ಭಾಸವಾಗುತ್ತಿದೆ. ಮರಳು ಸಮಸ್ಯೆಯನ್ನು ಈ ಕೂಡಲೇ ಪರಿಹರಿಸದಿದ್ದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಘೆರಾವ್, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಮುಂತಾದ ತೀವ್ರ ರೀತಿಯ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ಯು. ಜಯಂತ ನಾಯಕ್ ರವರು ಮಾತಾನಾಡುತ್ತಾ,ಮರಳು ಸಮಸ್ಯೆಯನ್ನು ಇನ್ನೂ ಕೂಡ ಇತ್ಯರ್ಥ ಮಾಡದ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೋರಾಟವನ್ನು ಬೆಂಬಲಿಸಿ DYFI ಜಿಲ್ಲಾ ನಾಯಕರಾದ ಮನೋಜ್ ವಾಮಂಜೂರುರವರು ಮಾತನಾಡಿದರು. ಪ್ರತಿಭಟನೆಯಲ್ಲಿ DYFI ನಾಯಕರಾದ ನಿತಿನ್ ಕುತ್ತಾರ್, ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿಯವರು ಭಾಗವಹಿಸಿದ್ದರು.
ಪ್ರತಿಭಟನೆಯ ನೇತ್ರತ್ವವನ್ನು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ಜನಾರ್ದನ ಕುತ್ತಾರ್, ರಾಮಣ್ಣ ವಿಟ್ಲ, ದಿನೇಶ್ ಶೆಟ್ಟಿ,ಚಂದ್ರಹಾಸ ಪಿಲಾರ್, ಅಶೋಕ್ ಸಾಲ್ಯಾನ್, ಜಯರಾಮ ತೇವುಲ,ಶೇಖರ್ ಪಿಲಾರ್, ರಾಮಚಂದ್ರ ಪಜೀರ್, ಉಮೇಶ್ ಶಕ್ತಿನಗರ, ನವೀನ್ ಕಾರ್ಪೆಂಟರ್, ನಾಗೇಶ್ ಕೋಟ್ಯಾನ್, ಮೋಹನ್ ಜಲ್ಲಿಗುಡ್ಡೆ, ಮುಂತಾದವರು ವಹಿಸಿದ್ದರು.
Click this button or press Ctrl+G to toggle between Kannada and English