ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕ್ಕೊಂಡ ಅನಾಗರಿಕ ಘಟನೆ

7:44 PM, Saturday, March 3rd, 2012
Share
1 Star2 Stars3 Stars4 Stars5 Stars
(4 rating, 1 votes)
Loading...

Journalist Bangalore

ಬೆಂಗಳೂರು : ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ನ್ಯಾಯಾಲಯಕ್ಕೆ ಕರೆತರುವುದನ್ನು ಚಿತ್ರೀಕರಣ ಮಾಡಲು ಹೋಗಿದ್ದ ಮಾಧ್ಯಮ ಸಿಬ್ಬಂದಿ ಮೇಲೆ ವಕೀಲರು ಬೇಕಾಬಿಟ್ಟಿ ಹಲ್ಲೆ ಮಾಡಿ ಅನಾಗರಿಕ ವರ್ತನೆ ತೋರಿಸಿದ್ದಾರೆ. ತಡೆಯಲು ಹೋದ ಪೊಲೀಸರ ಮೇಲೂ ಮುಗಿಬಿದ್ದಿದ್ದಾರೆ. ಜನಸಾಮಾನ್ಯರಿಗೆ ನ್ಯಾಯ ನೀಡಬೇಕಾದ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿ ಗೂಂಡಾವೃತ್ತಿ ತೋರಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಜನಾರ್ದನ ರೆಡ್ಡಿ ಅವರನ್ನು ಸಿವಿಲ್ ಕೋರ್ಟ್ ಕಾಂಪೆಕ್ಸ್ ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಯಿತು. ಈ ಸಮಯಕ್ಕೆ ಸರಿಯಾಗಿ ಕೋರ್ಟ್ ಕಾಂಪೆಕ್ಸ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ವಕೀಲರ ನಡುವೆ ಗಾಡಿ ತೆಗೆಯುವ ವಿಚಾರಕ್ಕೆ ಜಗಳ ನಡೆದಿತ್ತು. ಇದನ್ನು ನೋಡಿದ ಖಾಸಗಿ ಮಾಧ್ಯಮ ವಾಹಿನಿ ಪ್ರತಿನಿಧಿಗಳು ವಕೀಲರ ಗಲಾಟೆಯನ್ನು ಕೆಮೆರಾದಲ್ಲಿ ಸೆರೆಹಿಡಿಯಲು ಮುಂದಾದರು. ಇದನ್ನು ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

lawyers attack

ಜಗಳ ಮಾಡುತ್ತಿದ್ದ ವಕೀಲರು ತಮ್ಮ ಗಾಡಿ ಬಿಟ್ಟು ಚಿತ್ರೀಕರಣ ನಡೆಸುತ್ತಿದ್ದ ಕೆಮೆರಾಮ್ಯಾನ್ ಹಿಂದೆ ಬಿದ್ದರು. ಇವರ ಬೆಂಬಲಕ್ಕೆ ಇನ್ನಷ್ಟು ಕರಿಕೋಟು ಧರಿಸಿದ ವಕೀಲರು ಸೇರಿಕೊಂಡು ಕೋರ್ಟ್ ಆವರಣದಲ್ಲಿದ್ದ ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಆರಂಭಿಸಿದರು.

ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ಐದನೇ ಮಹಡಿಯಿಂದ ಮೇಲೆ ನಿಂತಿದ್ದ ವಕೀಲರು ಕುರ್ಚಿಗಳನ್ನು ಎಸೆದಿದ್ದರಿಂದ ಕೆಳಗೆ ನಿಂತಿದ್ದ ಅನೇಕ ಪೊಲೀಸರು ತೀವ್ರವಾಗಿ ಗಾಯಗೊಂಡರು.

ಕೃಷ್ಣರಾಜ ಪುರದ ಕೆಎಸ್ಆರ್‌ಪಿಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಮಹದೇವಪ್ಪ ಅವರು ಮಾರ್ಥಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಚೇತರಿಸಿದ್ದಾರೆ. ಇನ್ನೂ ಹದಿನೈದು ಪೊಲೀಸರಿಗೆ ತೀವ್ರವಾಗಿ ಗಾಯಗಳಾಗಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.

lawyers attack

ಪೇದೆ ಕಿರಣ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದರೆ, ಕೋಡಿಗೆಹಳ್ಳಿಯ ಪೇದೆ ನಾರಾಯಣಸ್ವಾಮಿ ಎಂಬುವವರನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಇನ್ನೂ ಕೆಲ ಪೊಲೀಸರು ವಕೀಲರ ಕಪಿಮುಷ್ಠಿಯಿಂದ ಪಾರಾಗಿ ಬಂದಿದ್ದಾರೆ. ವಕೀಲರ ರೌಡಿಯಿಸಂನಿಂದ ಬೇಸತ್ತ ಸಾರ್ವಜನಿಕರು ಕೂಡ ವಕೀಲರ ಮೇಲೆ ಕಲ್ಲು ತೂರಾಡಿದ ಘಟನೆ ನಡೆದಿದೆ.

ಹತ್ತಕ್ಕೂ ಹೆಚ್ಚು ಬೈಕುಗಳಿಗೆ ಮತ್ತು ಎರಡು ಪೊಲೀಸ್ ಜೀಪುಗಳಿಗೆ ಬೆಂಕಿ ಹಚ್ಚಿರುವ ವಕೀಲರ ಪುಂಡಾಟಿಕೆ ಮಿತಿಮೀರಿದ್ದರಿಂದ ಕೋರ್ಟ್ ಆವರಣದ ಸುತ್ತಮುತ್ತ ಸಿಆರ್‌ಪಿಸಿಯ 144ನೇ ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿಮಾಡಲಾಗಿದೆ. ವಕೀಲರ ಗೂಂಡಾಗಿರಿಯನ್ನು ಹದ್ದುಬಸ್ತಿಗೆ ತರಲು ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಸರಕಾರ ನೀಡಿದೆ.

ಮಾಧ್ಯಮದವರು, ಪೊಲೀಸರು ಮತ್ತು ಸಾರ್ವಜನಿಕರ ಮೇಲೂ ಬೆಂಗಳೂರಿನ ವಕೀಲರು ಹಲ್ಲೆ ನಡೆಸಿರುವ ಪ್ರಕರಣದ ತನಿಖೆ ನಡೆಸಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಈ ಪ್ರಕರಣದ ತನಿಖೆ ನಡೆಸಲಿದ್ದಾರೆ.

ಜನವರಿ 17 ರಂದು ಕ್ಷುಲ್ಲಕ ಕಾರಣಕ್ಕೆ ಕಾನೂನಿಗೆ ವಿರುದ್ಧವಾಗಿ ಪ್ರತಿಭಟನೆ ಮಾಡಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಮಾಡಿದ್ದ ವಕೀಲರ ವಿರುದ್ಧ ಅಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಾಗಿತ್ತು. ಪ್ರಕರಣದ ಸಮಗ್ರ ತನಿಖೆಗೆ ಗೃಹ ಸಚಿವ ಆರ್‌.ಅಶೋಕ್‌ ಆದೇಶಿಸಿದ್ದರು. ನಗರ ಪೊಲೀಸ್‌ ಆಯುಕ್ತ ಜ್ಯೋತಿಪ್ರಕಾಶ್‌ ಮಿರ್ಜಿ 20 ಪುಟಗಳ ವರದಿಯನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸಲ್ಲಿಸಿದ್ದರು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವದು ಎಂದು ಮುಖ್ಯಮಂತ್ರಿಯವರೂ ಭರವಸೆ ನೀಡಿದ್ದರು. ಅಂದು ಗೂಂಡಾಗಿರಿ ಪ್ರದರ್ಶಿಸಿದ ವಕೀಲರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ವಕೀಲರ ಸಂಘದ ಅಧ್ಯಕ್ಷರೂ, ಮಾಧ್ಯಮ-ವಕೀಲರು-ಪೊಲೀಸರ ನಡುವೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಸಭೆ ನಡೆಸುವುದಾಗಿ ಹೇಳಿದ್ದರು.

ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ವಕೀಲರು ನಡೆಸಿದ ದೌರ್ಜನ್ಯ ಸಿಆರ್‌ಪಿಸಿ 353ರ ವ್ಯಾಪ್ತಿಗೆ ಬರಲಿದ್ದು, ಅದರ ಪ್ರಕಾರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮತ್ತು ಹಲ್ಲೆ ನಡೆಸಿರುವವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಬಹುದು.

ಡ್ರೈವಿಂಗ್‌ ಲೈಸೆನ್ಸ್‌ ಇಟ್ಟುಕೊಳ್ಳದೆ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಯುವ ವಕೀಲರೊಬ್ಬರ ಮೇಲೆ ಪೊಲೀಸ್‌ ಪೇದೆ ಹಲ್ಲೆ ನಡೆಸಿದ ಘಟನೆ ಖಂಡಿಸಲು ವಕೀಲರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಏಕಾಏಕಿ ನಡೆಸಿದ ಪ್ರತಿಭಟನೆಯಿಂದ ನಗರದ ಸಂಚಾರ ವ್ಯವಸ್ಥೆಯೇ ಬುಡಮೇಲಾಗಿತ್ತು.

ತಾಸುಗಟ್ಟಲೆ ವಾಹನ ಸವಾರರು ನಿಂತಲ್ಲೇ ನಿಲ್ಲುವಂತಾಗಿತ್ತು. ಶಾಲಾ ಮಕ್ಕಳಿಂದ ಹಿಡಿದು ಸರ್ಕಾರಿ ನೌಕರರು, ಮಹಿಳೆಯರು, ಹಿರಿಯ ನಾಗರಿಕರು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಅಕ್ಷರಶಃ ಬಂಧಿಯಾಗಿದ್ದರು.

ಅಂದು ವಕೀಲರ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯವಸ್ತಗೊಂಡು ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿಲ್ಲಿಸಲು ಮುಂದಾದಾಗ ಸಹನೆ ಕಳೆದುಕೊಂಡ ವಕೀಲರು ಗೂಂಡಾಗಳ ರೀತಿಯಲ್ಲಿ ಪೊಲೀಸರ ಮೇಲೆ ಮುಗಿಬಿದ್ದಿದ್ದರು.

ವಕೀಲರ ದೌರ್ಜನ್ಯ ಚಿತ್ರೀಕರಣ ಮಾಡಲು ಮುಂದಾದ ಹಾಗೂ ಘಟನೆ ವರದಿ ಮಾಡಲು ಹೋಗಿದ್ದ ಮಾಧ್ಯಮದವರ ಮೇಲೂ ಅವರ ಆಕ್ರೋಶ ತಿರುಗಿತ್ತು. ಕಲ್ಲು ತೂರಾಟ, ಹಲ್ಲೆ, ಅವಾಚ್ಯ ಶಬ್ಧ ಬಳಕೆಯಿಂದ ಮೈಸೂರು ಬ್ಯಾಂಕ್‌ ವೃತ್ತ ರಣರಂಗವಾಗಿ ಮಾರ್ಪಟ್ಟಿತ್ತು. ಪೊಲೀಸ್‌ ಹಾಗೂ ಮಾಧ್ಯಮದವರ ವಾಹನಗಳು ಜಖಂಗೊಂಡಿದ್ದವು. ಅಗ್ನಿಶಾಮಕದಳ ವಾಹನಕ್ಕೆ ಮುತ್ತಿಗೆ ಹಾಕಿದ್ದ ವಕೀಲರು ಚಕ್ರಗಳ ಗಾಳಿ ಬಿಟ್ಟು ಚಾಲಕನ ಮೇಲೆ ಹಲ್ಲೆ ಮಾಡಿದ್ದರು. ಇವರ ದುಂಡಾವರ್ತನೆಗೆ ಒಂಬತ್ತು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು.

ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಿದ್ದ ಪೊಲೀಸರು ಹಾಗೂ ಮಾಧ್ಯಮದವರು ಗಾಯಗೊಂಡು ಆಸ್ಪತ್ರೆ ಸೇರಿದ್ದರು.

ಇಷ್ಟೆಲ್ಲಾ ರಾದ್ಧಾಂತ ಮಾಡಿದ ನಂತರವೂ ವಕೀಲನ ಮೇಲೆ ಹಲ್ಲೆ ನಡೆಸಿದ ಪೊಲೀಸ್‌ ಪೇದೆ ಅಮಾನತು ಮಾಡುವವರೆಗೂ ಒಂದು ಗುಂಪು ರಸ್ತೆ ಬಿಟ್ಟು ಕದಲಿರಲಿಲ್ಲ.

ವಕೀಲರ ಒಂದು ಗುಂಪು ಕಲ್ಲು ತೂರಾಟ, ಸಿಕ್ಕಸಿಕ್ಕವರ ಮೇಲೆ ಹಲ್ಲೆಯಲ್ಲಿ ತೊಡಗಿದ್ದರೆ ಮತ್ತೂಂದು ಗುಂಪು ಪ್ರತಿಭಟನೆಯಲ್ಲಿ ತೊಡಗಿತ್ತು. ವಕೀಲರ ಸಂಘದವರು ಪೊಲೀಸರ ಕ್ಷಮೆಯಾಚನೆಗೆ ಒತ್ತಾಯಿಸಲು ಸಭೆ ಸೇರಿದ್ದವು. ರಾಜಕಾರಣಿಗಳು ಮೌನಕ್ಕೆ ಶರಣಾಗಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English