ಮಂಗಳೂರು: ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವರಾದ ಅನಂತ ಕುಮಾರ್ ಅವರ ನಿಧನ ರಾಷ್ಟ್ರ ಮತ್ತು ರಾಜ್ಯಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ರಾಜ್ಯ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಾನು ಅವರನ್ನು ಭೇಟಿಯಾದ ಸಂದರ್ಭ ಅವರು ವಿರೋಧವೇ ಇಲ್ಲದೆ ನೀನು ಆಯ್ಕೆಯಾಗಿದ್ದಿ ನಿನಗೆ ಶುಭವಾಗಲಿ ಎಂದಿದ್ದರು. ಇತ್ತೀಚೆಗೆ ಅಟಲ್ ಜೀಯವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಬಿಡಲು ನಾನು ಯಡಿಯೂರಪ್ಪ, ಅನಂತ ಕುಮಾರ್ ಅವರು ಒಟ್ಟಾಗಿದ್ದೆವು. ನೀರಿನ ಸೆಳೆತಕ್ಕೆ ಅವರು ಒಂದು ರೀತಿ ನಡುಗುತ್ತಿದ್ದಾರೆ ಎಂದು ನನಗೆ ಅನಿಸಿತ್ತು. ಬಹಳ ಆತಂಕದಿಂದಲೇ ಅವರ ಭುಜವನ್ನು ಹಿಡಿದುಕೊಂಡಿದ್ದೆ. ಆಗ ಬಿಡು ಏನೂ ತೊಂದರೆ ಇಲ್ಲ ಎಂದಿದ್ದರು. ನನಗೆ ಅವರ ಕೈಯ ಸ್ಪರ್ಶಾನುಭವದಿಂದ ಅವರು ತುಂಬಾ ಕೃಶ ಆಗಿದ್ದಾರೆ ಅನಿಸಿತ್ತು.
ಭಾರತೀಯ ಜನತಾ ಪಕ್ಷಕ್ಕೆ ಹಾಗೂ ನನ್ನಂಥಹ ಅನೇಕ ಕಾರ್ಯಕರ್ತರಿಗೆ ಅನಂತ್ ಮಾರ್ಗದರ್ಶನ ಮಾಡಿದವರು. ಸಂಘ ಪರಿವಾರದಲ್ಲಿ ಬದುಕನ್ನು ರೂಪಿಸಿಕೊಂಡವರು. ಅಂತಹ ಹಿರಿಯರಾದ ಅನಂತ ಕುಮಾರ್ರವರ ನಿಧನ ನಮಗೆಲ್ಲಾ ತುಂಬಾ ನಷ್ಟವನ್ನುಂಟು ಮಾಡಿದೆ. ಅವರಿಗೆ ವಿಚಾರಗಳನ್ನು ಮಂಡನೆ ಮಾಡುವಾಗ ಅದ್ಭುತ ಶಕ್ತಿ ಇತ್ತು. ಅಟಲ್ ಜೀಯವರ ಸಚಿವ ಸಂಪುಟದಲ್ಲಿ ವಿಮಾನಯಾನ ಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಮೆಟ್ರೋ ರೈಲು ಬರುವ ಬಗ್ಗೆ ನಾವೆಲ್ಲ ಪ್ರಶ್ನೆ ಮಾಡಿದ್ದೆವು. ಆಗ ತುಂಬಿದ ಸಭೆಯಲ್ಲಿ ಅವರು ಮೆಟ್ರೋ ರೈಲಿನ ಒಂದೊಂದು ಎಳೆಯನ್ನು ವಿವರಿಸಿದ ಕಲ್ಪನೆ ಅತ್ಯಂತ ಅದ್ಭುತ. ವಿಚಾರವನ್ನು ಮಂಡಿಸುವ ಅದ್ಭುತವಾದ ಶಕ್ತಿ ಅವರಲ್ಲಿತ್ತು. ಅಂತಹ ಹಿರಿಯರು ನಮ್ಮನ್ನೆಲ್ಲಾ ಬಿಟ್ಟು ಹೋದ ನೋವು ನಮಗೆಲ್ಲರಿಗಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಹೇಳಿದರು.
ಅನಂತ ಕುಮಾರ್ ಕೇಂದ್ರ ಸಚಿವರಾಗಿದ್ದಾಗ ರಾಜ್ಯಕ್ಕೆ ಅನುದಾನವನ್ನು ನೀಡುವ ಕಾರ್ಯ ವಿಧಾನ ಹೇಗಿತ್ತು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸುತ್ತಾ, ಯಾವುದೇ ಯೋಜನೆ ತರುವಲ್ಲಿ, ಅನುದಾನ ಕೊಡುವಲ್ಲಿ ಅನಂತ್ ಕುಮಾರ್ ಅವರಿಗೆ ಸರಿಗಟ್ಟಿ ನಿಲ್ಲುವಂತಹ ಮತ್ತೊಬ್ಬರನ್ನು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ನರೇಂದ್ರ ಮೋದಿ ಸರಕಾರದಲ್ಲಿ ಅವರು ರಸಗೊಬ್ಬರ ಮಂತ್ರಿಯಾದ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೆ ರೈತರಿಗೆ ಗೊಬ್ಬರ ವಿತರಣೆಯ ಸಮಸ್ಯೆ ರಾಜ್ಯ ಮಾತ್ರವಲ್ಲ ಇಡೀ ರಾಷ್ಟ್ರದಲ್ಲಿಯೇ ಆಗಿಲ್ಲ.
ಯಾವುದೋ ಒಂದು ರಸಗೊಬ್ಬರ ಪಡೆಯಲು ಹೋಗುವ ಸಂದರ್ಭ ರೈತರು ಗಲಾಟೆ ಮಾಡಿರುವಂಥದ್ದು, ಗೋಲಿಬಾರ್ ನಡೆದಿರುವಂಥದ್ದು ನಾವೆಲ್ಲಾ ಕೇಳಿದ್ದೇವೆ. ಆದರೆ ಅನಂತ ಕುಮಾರ್ ರಸಗೊಬ್ಬರ ಮಂತ್ರಿಯಾದ ನಂತರ ಗೊಬ್ಬರ ಪೂರೈಕೆಯಲ್ಲಿ ಸಮಸ್ಯೆಯೇ ಆಗಿಲ್ಲ. ಬರುವ ವರ್ಷಕ್ಕೆ ಎಷ್ಟು ರಸಗೊಬ್ಬರ ಬೇಕು ಎಂದು ಎರಡು ವರ್ಷಕ್ಕಿಂತ ಮುಂಚೆಯೇ ಯೋಚನೆ ಮಾಡುವ ಶಕ್ತಿ ಅವರಲ್ಲಿತ್ತು ಎಂದು ಹೇಳಿದರು.
Click this button or press Ctrl+G to toggle between Kannada and English