ನಾಲ್ಕು ಮಂದಿಗೆ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ನಿರಂತರ ಓದಿನಿಂದ ಬರಹಕ್ಕೆ ಗಟ್ಟಿತನ: ಎಂ.ರಘುರಾಮ್

2:06 PM, Monday, November 12th, 2018
Share
1 Star2 Stars3 Stars4 Stars5 Stars
(No Ratings Yet)
Loading...

awardಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ ‘ಮಾಮ್'(ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ) ವತಿಯಿಂದ ಕೊಡಮಾಡುವ ಪ್ರಥಮ ವರ್ಷದ `ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭ ಶನಿವಾರ ನಗರದ ಬಿಜೈಯಲ್ಲಿರುವ ಆಡ್ ಐಡಿಯಾ ಕಚೇರಿಯಲ್ಲಿ ನಡೆಯಿತು.

ಸ್ನಾತಕೋತ್ತರ ಮತ್ತು ಪದವಿ ವಿಭಾಗದಿಂದ ತಲಾ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪದವಿ ವಿಭಾಗದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರೀತಿ ಆರ್.ಭಟ್(ಪ್ರಥಮ), ಸುವರ್ಚಲಾ ಅಂಬೇಕರ್ ಬಿ.ಎಸ್.(ದ್ವಿತೀಯ), ಸ್ನಾತಕೋತ್ತರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಂಸಿಜೆ ವಿದ್ಯಾರ್ಥಿನಿ ಮೇಘಲಕ್ಷ್ಮೀ ಎಂ.(ಪ್ರಥಮ) ಹಾಗೂ ದ್ವಿತೀಯ ಸ್ಥಾನವನ್ನು ಮೂಡಬಿದಿರೆ ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿ ಪ್ರಕಾಶ್ ಡಿ. ರಾಂಪೂರ್ ಅವರು ಪಡೆದುಕೊಂಡಿದ್ದರು. ವಿಜೇತರಿಗೆ ಹಿರಿಯ ಪತ್ರಕರ್ತ ಎಂ.ರಘುರಾಮ್ ಹಾಗೂ ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಶಸ್ತಿ ಪ್ರದಾನಿಸಿದರು. ಪ್ರಶಸ್ತಿಯು ಪ್ರಥಮ ತಲಾ ರೂ. 5000 ಹಾಗೂ ದ್ವಿತೀಯ ರೂ.2500 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿತ್ತು.

ಬಳಿಕ ಮಾತನಾಡಿದ ಹಿರಿಯ ಪತ್ರಕರ್ತ ಎಂ.ರಘುರಾಮ್, ಓದುವ ಹವ್ಯಾಸ ರೂಢಿಸಿಕೊಂಡಾಗ ಬರವಣಿಗೆ ಸುಲಲಿತವಾಗುತ್ತದೆ. ಜೊತೆಗೆ ಬರಹವೂ ಸತ್ವಯುತವಾಗಿರುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಬರವಣಿಗೆಯಲ್ಲಿ ನಿರಂತರವಾಗಿ ತೊಡಗಿಕೊಂಡಾಗ ಮಾತ್ರ ಉತ್ತಮ ಬರಹಗಾರರಾಗಲು ಸಾಧ್ಯ. ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವುದರೊಂದಿಗೆ ಅಗಾಧ ಜ್ಞಾನ ಸಂಪಾದಿಸಿಕೊಳ್ಳಬೇಕು. ಇದು ಸಾಧನೆಗೆ ಪೂರಕವಾಗುತ್ತದೆ ಎಂದವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಪತ್ರಿಕೋದ್ಯಮದಲ್ಲಿ ಕಲಿಕೆ ಎಂಬುದು ನಿರಂತರವಾಗಿರುತ್ತದೆ. ಇಲ್ಲಿ ಅನುಭವಗಳೇ ಪಾಠ ಕಲಿಸುತ್ತದೆ ಎಂದು ತನ್ನ ಪತ್ರಿಕೋದ್ಯಮ ವೃತ್ತಿ ಬದುಕಿನ ಸವಾಲುಗಳು ಮತ್ತು ಅನುಭವಗಳನ್ನು ಹಂಚಿಕೊಂಡರು.

ಇದೇ ಸಂದರ್ಭ ಪ್ರಶಸ್ತಿ ವಿಜೇತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಂಗಳೂರು ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಶಶಿಧರ್, ಮಾಮ್ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್.ಉಪಸ್ಥಿತರಿದ್ದರು. ಎನ್‌ಸ್ಪೈರ್ ಅವಾರ್ಡ್ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಶಸ್ತಿಯ ಉದ್ದೇಶದ ಕುರಿತು ವಿವರಿಸಿದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ.ಪಳ್ಳಿ ವಂದಿಸಿದರು. ಸದಸ್ಯ ಕೃಷ್ಣಮೋಹನ ತಲೆಂಗಳ ಕಾರ್ಯಕ್ರಮ ನಿರೂಪಿಸಿದರು. ಮಾಮ್ ಸದಸ್ಯ ಕೃಷ್ಣ ಕಿಶೋರ್ ಸಹಕರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English