ನವೆಂಬರ್ 16 ರಿಂದ 18 ರವರೆಗೆ ನಡೆಯಲಿರುವ ‘ಆಳ್ವಾಸ್ ನುಡಿಸಿರಿ’ನ 15 ನೇ ಆವೃತ್ತಿ

2:50 PM, Tuesday, November 13th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Alvas4ಮಂಗಳೂರು: ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು ಪರಿಕಲ್ಪನೆಯಲ್ಲಿ 15ನೇ ವರ್ಷದ “ಆಳ್ವಾಸ್‌ ನುಡಿಸಿರಿ’ ನ. 16ರಿಂದ 18ರ ವರೆಗೆ ಮೂಡಬಿದಿರೆ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸೋಮವಾರ ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, 16ರಂದು ಬೆಳಗ್ಗೆ 8.30ರಿಂದ ಮೆರವಣಿಗೆ ನಡೆಯಲಿದ್ದು, ಬರೋಡಾದ ಶಶಿಧರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಧ್ವಜಾರೋಹಣಗೈಯಲಿದ್ದಾರೆ. ಸಾಹಿತಿ ಡಾ| ಮಲ್ಲಿಕಾ ಎಸ್‌. ಘಂಟಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಸಂಶೋಧಕ ಡಾ| ಷ. ಶೆಟ್ಟರ್‌ ಉದ್ಘಾಟಿಸಲಿದ್ದಾರೆ ಎಂದರು.

ನುಡಿಸಿರಿಯಲ್ಲಿ ನಾಲ್ಕು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ದರ್ಶನ – ಸಾಹಿತ್ಯ ಗೋಷ್ಠಿಯಲ್ಲಿ “ರಾಮಾಯಣ: ಸಮಕಾಲೀನ ನೆಲೆಗಳು’ ಹಾಗೂ “ಮಹಾಭಾರತ: ಸಮಕಾಲೀನ ನೆಲೆಗಳು’, ಕರ್ನಾಟಕ ದರ್ಶನ – ಅಧ್ಯಾತ್ಮ ಪರಂಪರೆ ಗೋಷ್ಠಿಯಲ್ಲಿ “ವಚನ’ ಹಾಗೂ “ಕೀರ್ತನ’; ಕರ್ನಾಟಕ ದರ್ಶನ – ಬಹುಭಾಷಾ ಪರಂಪರೆ ಗೋಷ್ಠಿಯಲ್ಲಿ “ಶಿಕ್ಷಣ ಮತ್ತು ಸಾಮರಸ್ಯ’; ಕರ್ನಾಟಕ ದರ್ಶನ – ಜಾನಪದ ಪರಂಪರೆ ಗೋಷ್ಠಿಯಲ್ಲಿ “ಜನಪದ ಸಾಹಿತ್ಯ’, “ಜನಪದ ಆರಾಧನೆ’ಯ ಕುರಿತು ವಿಚಾರ ಮಂಡನೆ ನಡೆಯಲಿದೆ.

ಇತ್ತೀಚಿನ ಮಹತ್ವದ ಪ್ರಕಟನೆಗಳು, ಅಖಂಡ ಕರ್ನಾಟಕ, ಸಮಾಜಾಭಿವೃದ್ಧಿಯಲ್ಲಿ ವ್ಯಕ್ತಿ ಹೊಣೆಗಾರಿಕೆ, ಜೀವನ ಪದ್ಧತಿಯ ಆತಂಕದ ನೆಲೆಗಳು, ಸಮಕಾಲೀನ ಸಂದರ್ಭ: ಮಹಿಳಾ ಬಿಕ್ಕಟ್ಟುಗಳು, ಸಾಮಾಜಿಕ ಜಾಲತಾಣ, ಐಟಿಯಿಂದ ಮೇಟಿಗೆ ಮುಂತಾದ ವಿಚಾರಗಳನ್ನು ವಿವಿಧ ಗಣ್ಯರು ಮಂಡಿಸಲಿದ್ದಾರೆ. ಕವಿಸಮಯ-ಕವಿನಮನ, ಈ ವರ್ಷ ಗತಿಸಿದ ಸಾಧಕರಾದ ವಿದ್ವಾಂಸ ಡಾ| ಪ್ರಭುಶಂಕರ, ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ಹಾಗೂ ಕವಿ ಡಾ| ಸುಮತೀಂದ್ರ ನಾಡಿಗ ಅವರಿಗೆ ನುಡಿನಮನದ ಸಂಸ್ಮರಣೆ, ಕನ್ನಡದ ತಣ್ತೀಪದಗಾರ ಸಂತ ಶಿಶುನಾಳ ಶರೀಫರ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅವರಿಗೆ ದ್ವಿಶತಮಾನದ ನಮನ, ನನ್ನ ಕತೆ ನಿಮ್ಮ ಜತೆ ಮುಂತಾದ ಕಾರ್ಯಕ್ರಮಗಳಿವೆ ಎಂದು ಡಾ| ಎಂ. ಮೋಹನ ಆಳ್ವ ವಿವರಿಸಿದರು.

Alvas515ರಂದು ಸಂಜೆ 5ಕ್ಕೆ ಕೆ.ಎಸ್‌. ಪುಟ್ಟಣ್ಣಯ್ಯ ಕೃಷಿ ಆವರಣದ ಆನಂದ ಬೋಳಾರ್‌ ವೇದಿಕೆಯಲ್ಲಿ ಆಳ್ವಾಸ್‌ ಕೃಷಿಸಿರಿ ಉದ್ಘಾಟನೆಗೊಳ್ಳಲಿದೆ. ಆಳ್ವಾಸ್‌ ಚಿತ್ರಸಿರಿ ವರ್ಣಚಿತ್ರ ಕಲಾಮೇಳ ಹಾಗೂ ಪ್ರದರ್ಶನ, ವ್ಯಂಗ್ಯಚಿತ್ರ ರಚನೆ ಮತ್ತು ಪ್ರದರ್ಶನ, ಆಳ್ವಾಸ್‌ ವಿಜ್ಞಾನ ಸಿರಿ, ಆಳ್ವಾಸ್‌ ಛಾಯಾಚಿತ್ರಸಿರಿ ಮುಂತಾದ ಕಾರ್ಯಕ್ರಮಗಳಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ವತಿಯಿಂದ ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಆಳ್ವಾಸ್‌ ಚಲನಚಿತ್ರಸಿರಿ ಕುವೆಂಪು ಸಭಾಂಗಣ ದಲ್ಲಿ ನಡೆಯಲಿದೆ. ಒಟ್ಟು ಏಳು ವೇದಿಕೆಗಳಲ್ಲಿ ಏಕಕಾಲದಲ್ಲಿ ಆಳ್ವಾಸ್‌ ನುಡಿಸಿರಿ ಕಾರ್ಯಕ್ರಮಗಳು ಜರಗಲಿವೆ. ಕಾರ್ಯಕ್ರಮಕ್ಕೂ ಮುನ್ನ 15ರಂದು ಬೆಳಗ್ಗೆ 9.30ಕ್ಕೆ ಆಳ್ವಾಸ್‌ ವಿದ್ಯಾರ್ಥಿಸಿರಿ ಉದ್ಘಾಟನೆಗೊಳ್ಳಲಿದ್ದು, ಕಾಸರಗೋಡಿನ ಸನ್ನಿಧಿ ಟಿ. ರೈ ಪೆರ್ಲ ಅಧ್ಯಕ್ಷತೆ ವಹಿಸಲಿದ್ದಾರೆ.

18ರಂದು ಸಂಜೆ 4ಕ್ಕೆ ಸಮಾರೋಪ ಹಾಗೂ ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಪ್ರದಾನ ಸಮಾರಂಭವಿದೆ. ಪ್ರಶಸ್ತಿಯು 25 ರೂ. ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಅವರಿರಿಗೆ ಆಳ್ವಾಸ್‌ ನುಡಿಸಿರಿ – 2018ರ ಗೌರವ ಸನ್ಮಾನ ನಡೆಯಲಿದೆ ಎಂದರು. ಉಪಾಧ್ಯಕ್ಷ ಕೋಟಿ ಪ್ರಸಾದ್‌ ಆಳ್ವ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗಿಗಳಾಗುವ ಪ್ರತಿನಿಧಿಗಳಿಗೆ ಅನ್ಯಕಾರ್ಯ ನಿಮಿತ್ತ ರಜಾ ಸೌಲಭ್ಯವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗಳು ಮಂಜೂರು ಮಾಡಿದ್ದು, ಶಿಕ್ಷಕರು ಮತ್ತು ಉಪನ್ಯಾಸಕರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಡಾ| ಎಂ. ಮೋಹನ ಆಳ್ವ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English