ಆಳ್ವಾಸ್‌ ವಿದ್ಯಾರ್ಥಿ ಸಿರಿ-2018 ವಿದ್ಯಾರ್ಥಿ ಸಾಹಿತ್ಯ- ಸಂಸ್ಕೃತಿ ಸಮ್ಮೇಳನ ಉದ್ಘಾಟನೆ

11:35 AM, Friday, November 16th, 2018
Share
1 Star2 Stars3 Stars4 Stars5 Stars
(No Ratings Yet)
Loading...

vidyasiriಮೂಡಬಿದಿರೆ: ಆತ್ಮವಿಶ್ವಾಸದೊಂದಿಗೆ ಸ್ವಂತಿಕೆಯನ್ನು ಅರಳಿಕೊಳ್ಳುವುದರಷ್ಟೇ ಮುಖ್ಯ ಸಾಂಘಿಕ ಪ್ರಜ್ಞೆಯೊಂದಿಗೆ ಬದುಕಲು ಕಲಿಯು ವುದು ಎಂದು ನಟಿ, ನಿರ್ದೇಶಕಿ ವಿನಯಾ ಪ್ರಸಾದ್‌ ಹೇಳಿದರು.

ವಿದ್ಯಾಗಿರಿಯಲ್ಲಿ ಗುರುವಾರ “ಆಳ್ವಾಸ್‌ ವಿದ್ಯಾರ್ಥಿ ಸಿರಿ-2018′ ವಿದ್ಯಾರ್ಥಿ ಸಾಹಿತ್ಯ- ಸಂಸ್ಕೃತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರತೆಗಳಿವೆ ಎಂದು ಕೊರಗುವುದರಲ್ಲಿ ಅರ್ಥವಿಲ್ಲ; ಅವುಗಳ ನಡುವೆ ಸಂತೃಪ್ತ ಜೀವನ ನಡೆಸಲು ಸಮರ್ಥರಾದಾಗ ಬದುಕು ಸಾರ್ಥಕ ಎಂದು ಕಿವಿಮಾತು ಹೇಳಿದರು.

ಬಣ್ಣ, ರೂಪ, ಬುದ್ಧಿವಂತಿಕೆಗಳ ನೆಲೆಗಟ್ಟಿನ ತಾರತಮ್ಯ ಭಾವ ಸಲ್ಲದು. ಮನೆಯ ಎಲ್ಲ ಕೆಲಸಗಳಲ್ಲೂ ಇದ್ದೇನೆ ಎಂದು ತೊಡಗಿಸಿಕೊಳ್ಳುವುದಕ್ಕೆ ಹಿಂಜರಿಯಬಾರದು ಎಂದರು. ಉಡುಪಿಯಲ್ಲಿ ಜನಿಸಿ, ಅಲ್ಲೇ ಓದಿದ ದಿನಗಳನ್ನು ಸ್ಮರಿಸಿಕೊಂಡ ವಿನಯಾ ಪ್ರಸಾದ್‌, ಬಾಲ್ಯದಿಂದಲೇ ಸಂಗೀತ, ಅಭಿನಯ, ಸಾಹಿತ್ಯಗಳಲ್ಲಿ ತನಗೆ ಪೋಷಕರು, ಶಿಕ್ಷಕರು ಸ್ಫೂರ್ತಿ, ಬೆಂಬಲ, ಪ್ರೋತ್ಸಾಹ ನೀಡಿದ್ದರಿಂದ ಈ ಹಂತ ತಲುಪಲು ಸಾಧ್ಯವಾಗಿದೆ ಎಂದು ವಿನೀತರಾಗಿ ಹೇಳಿಕೊಂಡರು.

ಎಷ್ಟು ಭಾಷೆಗಳನ್ನು ಕಲಿಯುತ್ತೇವೆಯೋ ಅಷ್ಟರ ಮಟ್ಟಿಗೆ ನಮ್ಮ ತಿಳಿವಳಿಕೆ, ಜ್ಞಾನ ವಿಸ್ತರಿಸುತ್ತದೆ. ಇತರ ಭಾಷಿಕರೊಂದಿಗೆ ವ್ಯವಹರಿಸುತ್ತ ಅವರ ಭಾಷೆಯನ್ನು ಕಲಿಯುವ ಜತೆಗೆ ಕನ್ನಡವನ್ನು ಅವರಿಗೆ ಕಲಿಸುವ ಮೂಲಕ ಕನ್ನಡಾಭಿಮಾನ ಮೆರೆದಿದ್ದೇನೆ ಎಂದು ಹೇಳಿದಾಗ ಸಭೆಯಲ್ಲಿ ಕರತಾಡನ ಕೇಳಿಸಿತು. ನುಡಿಸಿರಿ, ವಿದ್ಯಾರ್ಥಿ ಸಿರಿ ಮತ್ತು ಅವುಗಳೊಂದಿಗೆ ಹೊಂದಿಕೊಂಡ ಸಾಹಿತ್ಯ, ಸಾಂಸ್ಕೃತಿಕ ಸಿರಿಗಳಿಗಿಂತ ಮಿಗಿಲಾದ ಸಂಪತ್ತು ಇಲ್ಲ. ಈ ಮೂಲಕ ವಿದ್ಯಾರ್ಥಿಗಳು, ಯುವಜನರ ಮನಸ್ಸನ್ನು ಅರಳಿಸುವ ಕಾರ್ಯ ಇಲ್ಲಿ ನಡೆಯುತ್ತಲಿದೆ. ಛಲ ಬಿಡದ ಚೇತನವಾಗಿ ಡಾ| ಮೋಹನ ಆಳ್ವರು ಮತ್ತು ಅವರೊಂದಿಗೆ ದುಡಿಯುತ್ತಿರುವ ಸಮೂಹವಿದೆ. ಅವರೆಲ್ಲರಿಗೂ ನನ್ನ ನಮನಗಳಿವೆ ಎಂದು ವಿನಯಾ ಪ್ರಸಾದ್‌ ಹೇಳಿದರು.

vidyasiri-2ಆಳ್ವಾಸ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ತುಮಕೂರು ಮೂಲದ ಚಿನ್ಮಯಿ ರಾಜೇಶ್‌ ಅವರ ಕವನ ಸಂಕಲನ “ಅಂಬರದ ಕಂಬನಿ’ ಹಾಗೂ ಪುತ್ತಿಗೆಯ ಆಳ್ವಾಸ್‌ ಸೆಂಟ್ರಲ್‌ ಸ್ಕೂಲ್‌ನ ವಿದ್ಯಾರ್ಥಿ ಅಥರ್ವ ಹೆಗ್ಡೆ ಅವರ “ಮೋಡಗಳು’ ಕೃತಿಯನ್ನು ಬಿಡುಗಡೆ ಗೊಳಿಸಲಾಯಿತು.

ಆಧುನಿಕ ಶಿಕ್ಷಣ ಪದ್ಧತಿ ಮತ್ತು ಆಧುನಿಕತೆಯ ಬದುಕನ್ನೇ ಅಭಿವೃದ್ಧಿ ಎಂದು ಗ್ರಹಿಸುವ ಭರಾಟೆಯಲ್ಲಿ ಸಂವೇದನೆಗಳನ್ನು ಕಳಕೊಳ್ಳದಿರೋಣ. ಭಾವಸ್ಪರ್ಶದಿಂದ ಕೂಡಿದ ಮನಸ್ಸು ಸಾಯದಿರಲಿ. ಈ ಭೂಮಿ ನಮ್ಮದು. ಭೂಮಿಯ ಉಳಿವಿನಲ್ಲೇ ನಮ್ಮ ಅಸ್ತಿತ್ವದ ಪ್ರಶ್ನೆಯೂ ಮುಂದಿನ ತಲೆಮಾರಿನ ಭವಿಷ್ಯದ ಪ್ರಶ್ನೆಯೂ ಅಡಗಿದೆ ಎಂಬುದನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕಾಗಿದೆ ಎಂದು ಕಾಸರಗೋಡು ಚಿನ್ಮಯಾ ವಿದ್ಯಾಲಯದ ವಿದ್ಯಾರ್ಥಿನಿ ಸನ್ನಿಧಿ ಟಿ. ರೈ ಪೆರ್ಲ ಅವರು ಅಭಿಪ್ರಾಯಪಟ್ಟರು.

“ಆಳ್ವಾಸ್‌ ವಿದ್ಯಾರ್ಥಿ ಸಿರಿ’ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಹಿರಿಯರು ಅಧ್ಯಾತ್ಮ, ಸಂಸ್ಕಾರ, ಪುರಾಣ ಕಾವ್ಯ ಉಪನಿಷತ್ತುಗಳ ಪರಿಧಿಯೊಳಗೆ ಬದುಕುವುದನ್ನು ಕಲಿಸಿಕೊಟ್ಟಿರುವುದನ್ನು ಅರಿಯದ ನಾವು ಅವುಗಳ ಮೌಲ್ಯವನ್ನರಿಯದೆ ನಾನೇ ಶಾಶ್ವತ ಎಂಬ ಭ್ರಮೆಯ ಮೂಲಕ ಎಲ್ಲವನ್ನೂ ಸ್ವಾರ್ಥಕ್ಕಾಗಿ ಬಾಚಿಕೊಂಡು, ವಿನಿಯೋಗಿಸಿಕೊಂಡು ಇಂದಿನ ವೈಪರೀತ್ಯಗಳಿಗೆ ಕಾರಣರಾಗುತ್ತಿದ್ದೇವೆ ಎಂದು ವಿಷಾದಿಸಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಸ್ತಾವನೆಗೈದರು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಹ್ಲಾದ ಮೂರ್ತಿ ಕಡಂದಲೆ ಸ್ವಾಗತಿಸಿದರು. ಡಿ.ಜೆ. ಆಂಗ್ಲ ಮಾಧ್ಯಮ ಶಾಲೆಯ ತೇಜಸ್ವಿನಿ ನಾಯಕ್‌ ವಂದಿಸಿದರು. ಆಳ್ವಾಸ್‌ ಪ.ಪೂ. ಕಾಲೇಜಿನ ಧಾತ್ರಿ ಪ್ರಸನ್ನ ನಿರೂಪಿಸಿದರು.

ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನದಲ್ಲಿ ವಿಟ್ಲದ ಸಮಸಾಂಪ್ರತಿಯ ಮೂರ್ತಿ ದೇರಾಜೆ, ಮಂಗಳೂರು ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆಯ ವಸಂತ ಶೆಟ್ಟಿ, ಯುವ ಸಂಗೀತ ಪ್ರತಿಭೆ ಸದ್ಗುಣ ಐತಾಳ್‌ ಅವರಿಗೆ ಆಳ್ವಾಸ್‌ ವಿದ್ಯಾರ್ಥಿ ಸಿರಿ ಪುರಸ್ಕಾರ-2018 ಹಾಗೂ ಗದಗ ಹಿರಿಯ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಅವರಿಗೆ “ಆಳ್ವಾಸ್‌ ವಿದ್ಯಾರ್ಥಿ ಸಿರಿ ಗೌರವ ಪ್ರಶಸ್ತಿ’ಗಳನ್ನು ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ನೀಡಿ ಗೌರವಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English