ಮಂಗಳೂರು: ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ವಿಶ್ವ ಬ್ಯಾಂಕ್ ನೆರವಿನ ರಾಷ್ಟ್ರೀಯ ಚಂಡಮಾರುತ ಅಪಾಯ ಕಡಿಮೆಗೊಳಿಸುವ ಯೋಜನೆಯಡಿ ಮೂರು ಕರಾವಳಿ ತೀರದ ದಕ್ಷಿಣ ಕನ್ನಡ,ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳನ್ನು ಸೇರಿಸಲಾಗಿದೆ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಕಾರ್ಯದs ಶ್ರೀ ಅಮರ್ ನಾರಾಯಣ್ ಹೇಳಿದರು. ಪರಿಣಾಮಕಾರಿ ಯೋಜನೆಯನ್ನು ತಳಮಟ್ಟದಿಂದ ರೂಪಿಸಬೇಕೆಂಬ ಸದುದ್ದೇಶದಿಂದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯನ್ನು ಇಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸ ಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಯದರ್ಶಿಗಳು, ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಆಯಾಯ ಜಿಲ್ಲೆಯಲ್ಲಿ ಎದುರಿಸಲಾದ ವಿಪತ್ತು ನಿರ್ವಹಣೆ ಹಾಗೂ ಯೋಜನೆಗಳು ರೂಪಿಸಿರುವ ಬಗ್ಗೆ ಮತ್ತು ಕ್ಷೇತ್ರ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಈ ಯೋಜನೆಯಡಿ ಮೂರು ಜಿಲ್ಲೆಗಳಿಗೆ ಅಂದಾಜು 34.66 ಕೋಟಿ ರೂ.ಗಳು ಲಭ್ಯವಾಗಲಿದ್ದು ಶೇಕಡ 75 ಕೇಂದ್ರ ಮತ್ತು ರಾಜ್ಯ ಶೇಕಡ 25ರ ಅನುಪಾತದಂತೆ ನೀಡಲಿದೆ. ವಿಪತ್ತಿನ ಬಳಿಕದ ನಿರ್ವಹಣೆಗಿಂತ ವಿಪತ್ತನ್ನು ಎದುರಿಸಲು ಜಿಲ್ಲೆಗಳು ಅಪೇಕ್ಷಿಸುವ ಸೌಲಭ್ಯಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು. ವಿವಿಧ ಇಲಾಖೆಗಳು ಹಲವು ಯೋಜನೆಗಳ ಬಗ್ಗೆ ಪ್ರಮುಖವಾಗಿ ಸಮುದ್ರ ಕೊರತೆದ ಬಗ್ಗೆ ಕೈಗೊಂಡಿರುವ ಕ್ರಮಗಳು, ಕೇರಳ ಮಾದರಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಮಳೆಗಾಲದಲ್ಲಿ ನೆರೆಯನ್ನು ಎದುರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ದೋಣಿ ಮತ್ತು ಮರ ಕೊಯ್ಯುವ ಯಂತ್ರದ ಅಗತ್ಯವಿದೆ ಎಂದ ದ.ಕ. ಜಿಲ್ಲಾಧಿಕಾರಿಗಳು, ಮಳೆಗಾಲದಲ್ಲಿ ಬೆಸ್ತರು ಎದುರಿಸುವ ಸಮಸ್ಯೆಗಳು ಮತ್ತು ಕೊಂಕಣ ರೈಲ್ವೇ ಮಾರ್ಗದಲ್ಲಾಗುವ ಭೂಕುಸಿತದ ಬಗ್ಗೆ ಸಭಾಧ್ಯಕ್ಷರ ಗಮನ ಸೆಳೆದರು. ಮೂರು ಜಿಲ್ಲೆಗಳಿಗೆ ಕ್ರಮವಾಗಿ ಮೂರು ದೋಣಿಗಳನ್ನು ಮಂಜೂರು ಮಾಡುವುದಾಗಿ ಹೇಳಿದ ಅಮರ್ ನಾರಾಯಣ್ ಅವರು, ವಿಪತ್ತು ನಿರ್ವಹಣಾ ವಿಭಾಗದಿಂದ 30 ಜಿಲ್ಲೆಗಳಿಗೂ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಹಣದ ಸದುಪಯೋಗದ ಜೊತೆಗೆ ಅಗತ್ಯಗಳ ಪಟ್ಟಿಯನ್ನೂ ನೀಡಿ ಎಂದರು.
ಈ ಸಂಬಂಧ ಸಂಪನ್ಮೂಲ ವ್ಯಕ್ತಿಗಳು ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಭವಿಸುವ ಕೃತಕ ನೆರೆಯ ಬಗ್ಗೆಯೂ ಚರ್ಚೆ ನಡೆಯಿತು. ಕಳೆದ ಸಾಲಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಇಂತಹ ಅವಘಡಗಳ ಬಗ್ಗೆ ಕೈಗೊಂಡ ಮುನ್ನೆಚ್ಚರಿಕೆಯಿಂದಾಗಿ ಹೆಚ್ಚಿನ ಅವಘಡ ಸಂಭವಿಸಿಲ್ಲ. ಪ್ರಸಕ್ತ ಸಾಲಿನಲ್ಲಿ ಅವಘಡ ಸಂಭವಿಸಿದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಹೇಳಿದರು.
ವಿಪತ್ತು ನಿರ್ವಹಣಾ ವಿಭಾಗದಿಂದ ಅನುದಾನ ಬಿಡುಗಡೆ ಮಾಡುವ ಸಂದರ್ಭದಲ್ಲಿ ತುರ್ತು ರಕ್ಷಣಾ ಸಾಮಗ್ರಿ ಖರೀದಿಗೆ ಯಾವುದೇ ನಿಬಂಧನೆ ಇರುವುದಿಲ್ಲ. ಈ ಸಲಕರಣೆಗಳ ನಿರ್ವಹಣೆಗೆ ಕೆ ಎಸ್ ಆರ್ ಪಿ, ಸ್ಥಳಿಯ ಪೋಲಿಸ್ ಅಥವಾ ಗೃಹರಕ್ಷಕ ದಳದವರಿಗೆ ವಹಿಸಿಕೊಡಬಹುದಾಗಿದ್ದು, ನಿರ್ಧಾರ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ನೌಕಾ ದಳದ ಕಮಾಂಡೆಂಟ್ ಅರಣ್ ಅವರು ಮಾತನಾಡಿ, ಮಳೆಗಾಲದಲ್ಲಿ ಸಮುದ್ರದಲ್ಲಿ ಹಾಗೂ ನದಿಗಳಲ್ಲಿ ಸಂಭವಿಸುವ ಜೀವ ಹಾನಿ ಮತ್ತು ಆಸ್ತಿ ನಾಶದ ಬಗ್ಗೆ ಹಾಗೂ ಅದನ್ನು ನಿಭಾಯಿಸುವ ಬಗ್ಗೆಯೂ ಮಾಹಿತಿ ನೀಡಿದರು. ಮೀನುಗಾರಿಕಾ ಇಲಾಖೆ ಉಪನಿರ್ದೆಶಕರು ಮಳೆಗಾಲದಲ್ಲಿ ಸಂವಹನದ ಕೊರತೆ ಯಿಂದಾಗುವ ವಿಳಂಬದ ಕುರಿತು ಹಾಗೂ ಹೈಪವರ್ ಕಮ್ಯುನಿಕೇಷನ್ ಫ್ರೀಕೆನ್ಸಿಯ ಅಗತ್ಯವನ್ನು ಪ್ರತಿಪಾದಿಸಿದರು.
ಉಡುಪಿ ಜಿಲ್ಲಾಧಿಕಾರಿ ಡಾ ಎಂ ಟಿ ರೇಜು ಅವರು ಮಾತನಾಡಿ, ವಿಪತ್ತು ನಿರ್ವಹಣೆ ಸಂಬಂಧ ಸಮಗ್ರ ವರದಿ ತಯಾರಿಕೆ ಸಂದರ್ಭದಲ್ಲಿ ತಾವು ಎದುರಿಸಿದ ಸವಾಲುಗಳನ್ನು ಸಭಾಧ್ಯಕ್ಷರ ಗಮನಕ್ಕೆ ತಂದರಲ್ಲದೆ, ಈ ವರದಿಯ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮ ವಿಷಯಗಳ ಬಗ್ಗೆಯೂ ಮಾಹಿತಿ ಅಗತ್ಯ ಎಂದರು.
ಉತ್ತರಕನ್ನಡದಲ್ಲಾಗುವ ವಿಪತ್ತುಗಳ ಮಾಹಿತಿಯನ್ನು ಅಲ್ಲಿನ ಜಿಲ್ಲಾಧಿಕಾರಿ ಶ್ರೀಮತಿ ಇಮ್ಕಾಂಗ್ಲಾ ಜಮೀರ್ ಅವರು ನೀಡಿದರು.
ಯೋಜನೆಯನ್ನು ರೂಪಿಸುವಾಗ ಸ್ಥಳೀಯರ ಪಾಲ್ಗೊಳ್ಳುವಿಕೆ ಹಾಗೂ ಅವರ ಅನುಭವವನ್ನು ದಾಖಲಿಸಿ ಎಂದು ಅಮರ್ ನಾರಾಯಣ್ ಹೇಳಿದರು. ಒಂದು ತಿಂಗಳೊಳಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿಯನ್ನು ನೀಡುವಂತೆ ಅವರು ಹೇಳಿದರು.
ಉಡುಪಿ ಸಿಇಒ ಶ್ರೀ ಪ್ರಭಾಕರ ಶರ್ಮಾ, ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರನ್ನೊಳಗೊಂಡಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English