ಮೂಡಬಿದ್ರಿ : ಭಾರತೀಯರ ಬದುಕಿನಲ್ಲಿ ಆಧುನಿಕ ಶಿಕ್ಷಣ ತನ್ನ ಪ್ರಭಾವವನ್ನು ಅತಿಯಾಗಿ ಬೀರುತ್ತಿದೆ, ಇದರಿಂದಾಗಿ ಇಂದು ನಮ್ಮ ಸುತ್ತಲಿನ ಪರಿಸರ, ಸಂಸ್ಕೃತಿ, ಕಲೆ, ಸಾಹಿತ್ಯ ಎಲ್ಲವನ್ನೂ ಕೀಳರಿಮೆಯಿಂದ ನೋಡುವಂತಾಗಿದೆ ಎಂದು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ‘ಜೀವನ ಪದ್ಧತಿಯ ಆತಂಕದ ನೆಲೆಗಳು ಎಂಬ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಬದುಕಿನ ವೃತ್ತಿಯು ನಮ್ಮ ಇಡೀ ಜೀವನ ಪದ್ಧತಿಯ ಬದಲಾವಣೆಗೆ ಕಾರಣವಾಗುತ್ತಾ ಹೋಗುತ್ತದೆ. ಈ ರೀತಿಯ ಬದಲಾವಣೆ ಒಂದು ವಸ್ತು, ವ್ಯಕ್ತಿ, ಸಂಸ್ಕೃತಿ, ಜೀವನ ಪದ್ದತಿಯ ಮೇಲೆ ಪ್ರಭಾವ ಬೀರುತ್ತದೆ. ಪಾಶ್ಚಾತ್ಯೀಕರಣ ಹಾಗೂ ಜಾಗತೀಕರಣ ಎಂಬ ಎರಡು ನೆಲೆಗಳು ಭಾರತೀಯ ಸಂಸ್ಕೃತಿಯ ಜೀವನ ಪದ್ಧ್ದತಿಯ ವಿನ್ಯಾಸವನ್ನು ಬದಲಾಯಿಸುತ್ತಾ ಹೋಗುತ್ತಿವೆ ಎಂದು ತಿಳಿಸಿದರು.
18 ನೇ ಶತಮಾನದಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆದ ಒಂದು ತಲ್ಲಣ ಇಡೀ ವ್ಯವಸ್ಥೆಗೆ ಪಸರಿಸಿ ಜೀವನ ಪದ್ದತಿಯ ಕ್ರಮವನ್ನು ಬದಲಾಯಿಸಿದೆ. ಪಾಶ್ಚ್ಯತೀಕರಣದಿಂದ ಇಂದು ದೇಶಿಯ ಸಂಸ್ಕೃತಿ ಸತ್ವವನ್ನು ಕಳೆದುಕೊಳ್ಳುತ್ತಿದೆ. ಇದು ಜನರಲ್ಲಿ ಸ್ವಾಭಿಮಾನ, ಸಹಬಾಳ್ವೆ, ಆತ್ಮವಿಶ್ವಾಸ, ಧೈರ‍್ಯ ಎಲ್ಲವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ಜಾಗತೀಕರಣದ ಪ್ರಭಾವದಿಂದ ಭಾವ ಜಗತ್ತು ನಾಶವಾಗಿ ವ್ಯಾವಹಾರಿಕ ಜಗತ್ತು ಹೆಚ್ಚುತ್ತಿದೆ. ಇದರಿಂದಾಗಿ ಶಿಕ್ಷಣ, ಸಂಬಂಧ ಸಾಹಿತ್ಯ, ಕಲೆ, ಇವೆಲ್ಲವೂ ವಸ್ತವನ್ನು ಬಳಸಿ ಬಿಸಾಡುವ ಪದ್ದತಿಯಂತೆ ರೂಪಿತವಾಗಿದೆ ಎಂದು ವಿವರಿಸಿದರು.
ಬದಲಾದ ಜೀವನ ವೈಖರಿಯಿಂದಾದ ಪ್ರಭಾವಗಳನ್ನು ವಿಶ್ಲೇಷಿಸಿದ ಅವರು ಸಮಸ್ಯೆಯನ್ನು ಎದುರಿಸುವ ಬದಲು ಪಲಾಯನ ಮಾಡುವ ಸ್ಥಿತಿ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಆಧುನಿಕ ತಂತ್ರಜ್ಞಾನವು ಸಮಾಜದಲ್ಲಿ ಸಂವಹನ ಕ್ರಾಂತಿಯನ್ನು ಹೆಚ್ಚಿಸಿದೆ. ಆದರೆ ಇದು ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದ್ದು, ಜೀವನವನ್ನು ಅಪಾಯದ ನೆಲೆಯಲ್ಲಿ ನಿಲ್ಲಿಸಿದೆ. ಹೀಗಾಗಿ ಆಧುನಿಕ ಜಗತ್ತಿನಲ್ಲಿ ಸ್ವಾಯತ್ತ ಪ್ರಜ್ಞೆ ಜನರಲ್ಲಿ ಮೂಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರು, ಡಾ. ಮಲ್ಲಿಕಾ ಎಸ್. ಘಂಟಿ, ಆಳ್ವಾಸ್ ನುಡಿಸಿರಿಯ ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಾ. ನಾ. ದಾಮೋದರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂಪತ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಆಳ್ವಾಸ್ ನ ಸುಮಾರು 300 ವಿದ್ಯಾರ್ಥಿಗಳಿಂದ ರಾತ್ರಿ 8.30 ರಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಿತು.
Click this button or press Ctrl+G to toggle between Kannada and English