15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿಗೆ ವೈಭವೋಪೇತ ತೆರೆ

8:19 PM, Sunday, November 18th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Alvas ಮೂಡಬಿದಿರೆ: ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆ ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಜರುಗಿದ 15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿ ಭಾನುವಾರದಂದು ವೈಭವಪೂರ್ಣವಾಗಿ ಸಮಾಪನಗೊಂಡಿತು. ಇದೇ ಸಂದರ್ಭದಲ್ಲಿ 12 ಸಾಧಕರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಮಾತನಾಡಿ “ನಾವಿಂದು ನಮ್ಮ ಮಕ್ಕಳಿಗೆ ಎಷ್ಟೇ ಉನ್ನತ ಶಿಕ್ಷಣ ನೀಡಿದರೂ, ಅದು ಸಾರ್ಥಕ್ಯವಾಗುತ್ತಿದೆಯಾ ಎಂದು ವಿಮರ್ಶಿಸಿಕೊಳ್ಳುವ ಅನಿವಾರ್ಯತೆ ಒದಗಿದೆ. ಕಾರಣ ಬ್ರಿಟೀಷರು ನಮ್ಮವರ ಅಪೇಕ್ಷೆಯ ಮೇರೆಗೆ ಇಂಗ್ಲೀಷ್ ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿ ಆರಂಭಿಸಿ, ನಂತರ ನಮ್ಮ ಸಂಸ್ಕೃತಿಯನ್ನೇ ಸತ್ವರಹಿತವಾದದ್ದು ಎಂದು ಹೇಳಿದಾಗ ನಾವ್ಯಾರು ಪ್ರಶ್ನಿಸಲಿಲ್ಲ. ನಮ್ಮ ಇತಿಹಾಸಗಳಂತಿದ್ದ ರಾಮಾಯಣ, ಮಹಾಭಾರತವನ್ನು ಕಟ್ಟುಕಥೆಯಂತೆ ಬಿಂಬಿಸಿದಾಗಲೂ ನಾವು ಏನೂ ಹೇಳಲಿಲ್ಲ. ಇದರಿಂದ ಅವರು ನಮ್ಮನ್ನು ನಮ್ಮದೇ ಪರಂಪರೆಗೆ ಪರಕೀಯರಾಗುವಂತೆ ಮಾಡಿದ್ದಾರೆ. ಭಾರತೀಯರಲ್ಲಿ ಅನಾದಿ ಮತ್ತು ಪ್ರಸ್ತುತದ ನಡುವಿದ್ದ ಕೊಂಡಿಯನ್ನು ಕತ್ತರಿಸಿದ್ದಾರೆ. ಇದರಿಂದ ನಮ್ಮದು ತಂದೆ ಇಲ್ಲದ ಸಂಸ್ಕೃತಿಯಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

“ಬ್ರಿಟೀಷರ ಪ್ರಭಾವ ಕೇವಲ ಶಿಕ್ಷಣಕ್ಕಷ್ಟೇ ಅಲ್ಲದೇ ನಮ್ಮ ಸಾಹಿತ್ಯವನ್ನೂ ಆವರಿಸಿಕೊಂಡಿದೆ. ಕಥೆ ಹೇಳುವುದು ಭಾರತೀಯರ ಮನಸ್ಥಿತಿ. ಕಥೆಯ ಮೂಲಕ ಭಾವಸೇತು ಬೆಸೆಯುವ ಕಾರ್ಯ ಭಾರತೀಯ ಸಾಹಿತ್ಯ ಮಾಡುತ್ತದೆ. ಆದರೆ ಇಂದು ಪಾಶ್ಚಾತ್ಯದ ಛಾಯೆಯಿಂದ ಸೃಜನಾತ್ಮಕ ಚಿಂತನೆಗಳು ಧಕ್ಕೆಗೊಳಗಾಗಿವೆ. ಅಲ್ಲದೇ ಪಾಶ್ಚಾತ್ಯ ಪದ್ಧತಿಗಳನ್ನು ನಮ್ಮ ಮಕ್ಕಳ ಮೇಲೂ ಹೇರಲಾಗುತ್ತಿದೆ. ಆಂಗ್ಲ ಭಾಷೆಯನ್ನು ಅನ್ನದ ಭಾಷೆಯಾಗಿ ಪರಿವರ್ತಿಸಿದ ಪರಿಣಾಮ, ಮಕ್ಕಳ ಕ್ರಿಯಾಶೀಲ, ಸೃಜನ ಮನಸ್ಸುಗಳು ಕಮರುತ್ತಿವೆ. ಈ ಎಲ್ಲಾ ಕಾರಣದಿಂದ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಅದನ್ನು ಶ್ರೀಮಂತಿಕೆಯನ್ನು ತಿಳಿಸುವ ಕೆಲಸಗಳು ಆಗಬೇಕಿದೆ.” ಎಂದು ಅಭಿಪ್ರಾಯಪಟ್ಟರು.

ಸಮಾಪನ ಭಾಷಣ ಮಾಡಿದ 15ನೇ ಆವೃತ್ತಿಯ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ .ಎಸ್ ಘಂಟಿ “ನಮ್ಮ ಕಡೆ ಒಂದು ಮಾತಿದೆ, ಮನಸ್ಸು ತುಂಬಿದರೆ ಮಾತು ಹೊರಢೊದಿಲ್ಲ ಎಂದು. ಅದರಂತೆ ಈ ನುಡಿಸಿರಿಗೆ ಸಾಕ್ಷಿಯಾಗಿ ನನಗೆ ಮಾತುಗಳೇ ಹೊರಡುತ್ತಿಲ್ಲ. ಇಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳಿಂದ ಬಹು ದೊಡ್ಡ ಸಂಪತ್ತು ನನ್ನ ಪಾಲಿಗೆ ದೊರೆತಿದೆ. ಕೇಂದ್ರ ಆಶಯಕ್ಕನುಗುಣವಾಗಿ ಕರ್ನಾಟಕದ ಬಹುರೂಪಿ ಆಯಾಮಗಳನ್ನು ಪರಿಚಯಿಸುವಲ್ಲಿ, ಒಡಮೂಡಿಸುವಲ್ಲಿ ನುಡಿಸಿರಿ ಯಶಸ್ವಿಯಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

“ನುಡಿಸಿರಿಯ ಭಾಗವಾಗಿ ಮೂರು ದಿನಗಳ ಕಾಲ ನಡೆದ 10 ವಿಚಾರಗೋಷ್ಠಿಗಳು, 8 ಕವಿಸಮಯ- ಕವಿನಮನ, 8ಉಪನ್ಯಾಸಗಳು, 2 ಕಿರುನಾಟಕ ಹಾಗೂ ಇಬ್ಬರು ವ್ಯಕ್ತಿಗಳ ಕಥೆಗಳು ಎಲ್ಲವೂ ಬಹುರೂಪಿ ಆಯಾಮವನ್ನೇ ಅವಲಂಬಿಸಿತ್ತು. ಅದರಂತೆ ವಿಚಾರ ಮಂಡಿಸಿದ ಎಲ್ಲರೂ ಪುರಾವೆ ಸಹಿತ ತಮ್ಮ ಪ್ರಾಸ್ತಾವಿಕ ವಿಷಯಗಳಿಗೆ ಮತ್ತಷ್ಟು ಬಲ ತುಂಬಿದರು. ಪ್ರೀತಿ ಇಲ್ಲದೇ ಮಾಡುವ ಕೆಲಸ ನಿರರ್ಥಕ ಎಂದು ಹೇಳಲಾಗುತ್ತದೆ. ಆದರಿಲ್ಲಿ ನಡೆದ ಕಾರ್ಯ ಎಲ್ಲರೂ ಅನುಸರಿಸುವಂಥದ್ದು” ಎಂದು ತಿಳಿಸಿದರು.

ನುಡಿಸಿರಿ ಒಂದು ಸುಂದರ ವಸ್ತ್ರ
“ಜಗತ್ತು ಬಣ್ಣ ಬಣ್ಣದ ಬಟ್ಟೆಯನ್ನು ಬಯಸುತ್ತದೆ. ಅದು ಎಲ್ಲಾ ರೀತಿಯಿಂದಲೂ ಆಕರ್ಷಕವಾಗಿರಬೇಕು ಎಂದು ಬೇಡುತ್ತದೆ. ಅದರಂತೆ ಜನರ ಮನಸ್ಥಿತಿಗೆ ಅನುಗುಣವಾಗಿ ಜತನದಿಂದ ಹೆಣೆದ ಸುಂದರ ವಸ್ತ್ರವೇ ನುಡಿಸಿರಿ” ಎಂದು ತಿಳಿಸಿದರು.

ಸಾಹಿತ್ಯದ ಆಚೆಗಿನ ಆಯಾಮ
“ಸಾಹಿತ್ಯ ಮತ್ತು ಸಮ್ಮೇಳನಗಳು ಕೇವಲ ಗೋಷ್ಠಿ, ಚರ್ಚೆಗಳಿಗಷ್ಟೇ ಸೀಮಿತ ಅಲ್ಲ. ಇದಕ್ಕೆ ಅವುಗಳಾಚೆಗಿನ ಒಂದು ಆಯಾಮ ಇದೆ. ಸಾಹಿತ್ಯ ಬರೀ ಸುಖ ಕೊಡುವಂಥದಲ್ಲ, ಬದಲಿಗೆ ಎಲ್ಲರಿಗೂ ಸಮಾನತೆ ಒದಗಿಸುವ, ಬದುಕು ಕಟ್ಟಿಕೊಡುವ ವಿಷಯವಾಗಿದೆ. ಮನಸ್ಸಿನ ಮಪರಿವರ್ತನೆ ಸಾಹಿತ್ಯ ಕೊಂಡಿಯಂತೆ ಕೆಲಸ ಮಾಡುತ್ತದೆ. ಆದರೆ ಇಂದು ನಾವು ಕೀಲುಗಳಿದ ಬಂಡಿಯ ಮೇಲೆ ಓಡುತ್ತಿದ್ದೇವೆ. ಇಂಥಹ ಆತಂಕ ನಿವಾರಣೆಗೆ ಸಾಹಿತ್ಯ ಪೂರಕ” ಎಂದು ತಿಳಿಸಿದರು.

ಬದುಕು ಕಲಿಸುವ ನುಡಿಸಿರಿ
“ನುಡಿಸಿರಿ ಸಾಹಿತ್ಯವನ್ನು ಬೆಳೆಸುವುದಲ್ಲದೇ, ಕಲೆಯನ್ನು ಅದರೊಟ್ಟಿಗೆ ಅನೇಕ ಸಾಮಾನ್ಯರನ್ನು ತನ್ನೊಟ್ಟಿಗೆ ಬೆಳೆಸುತ್ತದೆ. ಕಲೆಯನ್ನು ಉಳಿಸಬೇಕು ಎಂದು ಭಾಷಣ ಮಾಡಿದರಷ್ಟೇ ಸಾಲದು. ಅದಕ್ಕೆ ತಕ್ಕಂತೆ ಕೆಲಸಗಳು ಆಗಬೇಕು. ಆ ರೀತಿಯ ಕಾರ್ಯ ನುಡಿಸಿರಿ ಮಾಡುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಕಲಾವಿರನ್ನು ಕರೆಯಿಸಿ, ಇಲ್ಲಿ ಅವಕಾಶ ನೀಡಿ, ತನ್ಮೂಲಕ ಅವರಿಗೆ ಪ್ರೋತ್ಸಾಹ ನೀಡುತ್ತಿದೆ. ಸಣ್ಣ ಸಣ್ಣ ಅಂಗಡಿಗಳ ವ್ಯಾಪಾರಿಗಳು ಇಲ್ಲಿ ಬಂದು ಉತ್ತಮ ನೆಲೆಯನ್ನು ಗಳಿಸುತ್ತಿದ್ದಾರೆ. ಈ ಮುಖೇನ ಅರಿವಿನ ಲೋಕದ ದರ್ಶನವಾಗುತ್ತಿದೆ” ಎಂದು ಡಾ. ಘಂಟಿ ತಿಳಿಸಿದರು.

“ಇಂದು ಸಮಾಜದಲ್ಲಿ ಕೆಲವರಷ್ಟೇ ಬೆಳಕಿನಲ್ಲಿ ಬದುಕುತ್ತಿದ್ದಾರೆ. ಮತ್ತನೇಕರು ಕತ್ತಲೆಯಲ್ಲಿ ಇದ್ದಾರೆ. ಅಂದಮಾತ್ರಕ್ಕೆ ಬೆಳಕಿನಲ್ಲಿರುವವರು ಶ್ರೇಷ್ಠರು ಎಂದರ್ಥವಲ್ಲ. ಕೃತಕ ಬೆಳಕು ಎಂದಿಗೂ ಶಾಶ್ವತವಲ್ಲ. ಆದರೆ ಕತ್ತಲೆಯಲ್ಲಿರುವವರಿಗೆ ತಮ್ಮ ತಲೆಯ ಮೇಲೆ ಒಂದು ಕಣ್ಬೆಳಕಿರುತ್ತದೆ. ಕೃತಕ ಆರಿದರೂ, ಅದೆಂದೂ ಆರದು. ಅಂಥಹ ಬೆಳಕೇ ದೊಡ್ಡ ಶಕ್ತಿ. ಅದನ್ನು ಹೊತ್ತು ನಾವೆಲ್ಲರೂ ಸಾಗಬೇಕಿದೆ. ಅಂತೆಯೇ ಸಾಹಿತ್ಯ ಮತ್ತು ಕಲೆ ಕೂಡ ಸಾಮಾಜಿಕ ಆಶಯವಾಗಿ ಪರಿವರ್ತಿತವಾಗಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಸಮಾರೋಪ ಸಮಾರಂಭದಲ್ಲಿ ೧೫ನೇ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಗಣ್ಯರಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಶಾಲು, ಫಲ-ಪುಷ್ಪ, 15000 ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಸಮಾರಣಭದಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ವಿಧಾನ ಪರೊಷತ್ ಸದಸ್ಯ ಗಣೇಶ್ ಕಾರ್ಣಿಕ್, ಎಸ್. ಎಲ್. ಬೋಜೇಗೌಡ ಮತ್ತಿತ್ತರರು ಉಪಸ್ಥಿತರಿದ್ದರು.

ಸಹೃದಯ ಪ್ರೇಕ್ಷಕರು
“ಪ್ರೇಕ್ಷಕ ವರ್ಗ ಹೇಗಿರಬೇಕೆಂದು ನುಡಿಸಿರಿ ಉತ್ತಮ ರೀತಿಯಲ್ಲಿ ತಿಳಿಸಿಕೊಡುತ್ತದೆ. ಬೇರಾವ ಸಾಹಿತ್ಯ ಸಮ್ಮೇಳನಗಳಂತೆ, ಪೋಲಿಸರ ಹಾವಳಿ ಹಾಗೂ ರಾಜಕಾರಣಿಗಳ ಅವಾಂತರವಿಲ್ಲದೇ ನುಡಿಸಿರಿ ಸಂಪೂರ್ಣ ವಿಭಿನ್ನವಾಗಿ ಮೂಡಿಬಂದಿದೆ” ಎಂದು ಹೇಳಿದರು.

ನುಡಿಸಿರಿಗೆ ಇಂದು ಸರಿಯಾದ ರೂಪ ಬರುತ್ತಿದೆ. ಈ ಯಶಸ್ಸು ೧೦೦ವರ್ಷ ಇದನ್ನು ಆಯೋಜಿಸುವಂತೆ ನನ್ನನ್ನು ಪ್ರೇರೇಪಿಸಿದೆ
– ಡಾ. ಎಂ. ಮೋಹನ್ ಆಳ್ವ

ಸಜ್ಜನ ಸಮ್ಮಾನ
ನುಡಿಸಿರಿಯ ಸಮಾರೋಪ ಸಮಾರಂಭದಂದು ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ್ ಹಾಗೂ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ ಎಸ್ ಘಂಟಿಯನ್ನು ಸಮ್ಮಾನಿಸಲಾಯಿತು.

ಉಡುಗೆಯ ಮೆರುಗು
ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿಯ ರೂವಾರಿ ಜರಿಯಿಂದ ಅಲಂಕಾರಗೊಂಡ ಕೇಸರಿ ಪೇಟ ಹಾಗೂ ಜುಬ್ಬಾ ಪೈಜಾಮ ತೋಟ್ಟು ಮನಸೆಳೆದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English