ಬೆಂಗಳೂರು: ಏಕಾಏಕಿ ಗೋವಾ ಸರ್ಕಾರ ಕರ್ನಾಟಕದ ಮೀನು ನಿಷೇಧ ಮಾಡಿರುವುದು ಸರಿಯಲ್ಲ ಎಂದು ಸಚಿವ ಯು.ಟಿ.ಖಾದರ್ ಆಕ್ಷೇಪ ವ್ಯಕ್ತಪಡಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಏಕಾಏಕಿ ಈ ರೀತಿ ಮಾಡಿರೋದು ಸರಿಯಲ್ಲ. ಈ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನಾದರೂ ನೀಡಬೇಕಾಗಿತ್ತು. ನಮ್ಮ ಜೊತೆ ಗೋವಾ ಸರ್ಕಾರ ಚರ್ಚೆ ಮಾಡಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ರೀತಿ ಚರ್ಚಿಸದೆ ಹೀಗೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇವೆ. ಜೊತೆಗೆ ಕ್ಯಾಬಿನೆಟ್ನಲ್ಲೂ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು. ನಾವೂ ಏಕಾಏಕಿ ಗೋವಾ ಲಿಕ್ಕರನ್ನು ನಿಷೇಧ ಮಾಡಿದರೆ ಹೇಗೆ ಎಂದು ಇದೇ ವೇಳೆ ಕಿಡಿಕಾರಿದರು.
ರೈತ ಮಹಿಳೆ ವಿರುದ್ಧ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಮುಖ್ಯಮಂತ್ರಿ ಮಾತನ್ನು ಮಿಸ್ ಇಂಟರ್ ಪ್ರಿಂಟ್ ಮಾಡಿ ಬಿತ್ತರಿಸಿರುವುದು ಸರಿ ಅಲ್ಲ ಎಂದು ಸಮರ್ಥಿಸಿಕೊಂಡರು.
ಪ್ರತಿಪಕ್ಷದವರು ರೈತರ ಸಂಪೂರ್ಣ ಸಾಲ ಮನ್ನಾ ಸಾಧ್ಯವಿಲ್ಲ ಅಂತಿದ್ದರು. ಎಲ್ಲರೂ ಕೈ ಕಟ್ಟಿ ಕುಳಿತಾಗ ಕುಮಾರಸ್ವಾಮಿ ಸಾಲ ಮನ್ನಾ ಮಾಡುವುದಕ್ಕೆ ಮುಂದಾಗಿದ್ದಾರೆ. ಅಪಾರ್ಥ ಉದ್ದೇಶದಿಂದ ಅವರು ಖಂಡಿತ ಮಾತನಾಡಿರಲಿಕ್ಕಿಲ್ಲ. ಸಿಎಂ ಯಾರ ಮನಸ್ಸಿಗೂ ನೋವು ಮಾಡಿಲ್ಲ. ಇಷ್ಟು ದೊಡ್ಡದು ಮಾಡೋ ವಿಚಾರ ಅದು ಅಲ್ಲ. ಜನ ಅದನ್ನು ಅಪಾರ್ಥ ಮಾಡ್ಕೊಳ್ಳಬಾರದು ಎಂದು ವಿವರಿಸಿದರು.
Click this button or press Ctrl+G to toggle between Kannada and English