ಮಂಗಳೂರು: ಸಾಮಾನ್ಯ ಸಭೆ ಹಾಗೂ ವಿವಿಧ ಸ್ಥಾಯಿ ಸಮಿತಿಯ ಸಭೆಗಳು ಪ್ರತಿ ತಿಂಗಳು ಅಥವಾ 15 ದಿನಗಳಿಗೊಮ್ಮೆ ನಡೆಸುವ ತೀರ್ಮಾನವನ್ನು ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಆದರೆ ಕಳೆದ ವಿಧಾನಸಭ ಚುನಾವಣೆಯ ನಂತರ ಈ ಸಭೆಗಳು ನಡೆದಿರುವುದು ಅತ್ಯಂತ ವಿರಳ.
ಒಂದು ಸಭೆ ಅಕ್ಟೋಬರ್ಗೆ ನಡೆದಿದೆ, ಮತ್ತೊಂದು ಇಂದು ಕರೆಯಲಾಗಿತ್ತು. ಆದರೆ ನಾವು ಈ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಪಾಲಿಕೆಯ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಮುಖಂಡ ಪ್ರೇಮಾನಂದ್ ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಸಮಿತಿಯಲ್ಲಿ ಇಬ್ಬರು ಶಾಸಕರನ್ನು ಅಂದರೆ ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರದ ಶಾಸಕರನ್ನು ಸಭೆಗೆ ಆಹ್ವಾನಿಸುವುದು ನಿಯಮ. ಏಕೆಂದರೆ ಅವರು ಅಭಿವೃದ್ಧಿ ಕಾರ್ಯಗಳ ಬಗ್ಗೆ, ಯೋಜನೆಗಳ ಬಗ್ಗೆ, ಅಭಿವೃದ್ಧಿಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಆದರೆ ಅಭಿವೃದ್ಧಿ ಸಮಿತಿಯ ಸಭೆಗಳು ಎರಡು ತಿಂಗಳಿನಿಂದ ನಡೆಯುತ್ತಿದ್ದು, ಎರಡೂ ಸಭೆಗೂ ನಮ್ಮ ಶಾಸಕರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಆಯುಕ್ತರಲ್ಲಿ ಪ್ರಶ್ನಿಸಿದಾಗ, ಇದು ಮೇಯರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ. ಮೇಯರ್ ಸೂಚನೆ ಕೊಟ್ಟರೆ ನಾನು ಶಾಸಕರನ್ನು ಸಭೆಗೆ ಕರೆಯುತ್ತೇನೆ ಎಂದು ಅವರು ಸಭೆಯಲ್ಲಿ ಉತ್ತರಿಸಿದರು.
ಇದೇ ವೇಳೆ ಮೇಯರ್ ಕೂಡಾ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಶಾಸಕರನ್ನೂ ಸಭೆಗೆ ಆಹ್ವಾನಿಸಿ ಅವರ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದಿದ್ದರು. ಆದರೆ ಇವತ್ತು ಮತ್ತೆ ಅದು ಪುನರಾವರ್ತನೆ ಆಗಿದೆ. ಈ ಹಿನ್ನೆಲೆಯಲ್ಲಿ ನಾವು ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಅವರು ಹೇಳಿದರು.
ಇದು ರಾಜಕೀಯ ಉದ್ದೇಶಕ್ಕೋಸ್ಕರ ನಡೆಯುತ್ತಿರುವ ತಂತ್ರಗಾರಿಕೆ. ಇನ್ನೇನು ನಗರಪಾಲಿಕೆ ಚುನಾವಣೆ ಬರಲಿದೆ. ಎಲ್ಲಿ ಈ ಶಾಸಕರು ನಗರಪಾಲಿಕೆಯ ಒಟ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಒಂದಷ್ಟು ಮಾಹಿತಿ ಸಂಗ್ರಹಿಸುತ್ತಾರೆ. ಸರ್ಕಾರದಿಂದ ಬಂದ ಅನುದಾನಗಳ ಬಗ್ಗೆ ಇನ್ನಷ್ಟು ಶೀಘ್ರವಾಗಿ ಪ್ರಯತ್ನಗಳನ್ನು ಮಾಡಿ, ಇದರ ರಾಜಕೀಯ ಲಾಭ ಬಿಜೆಪಿಗೆ ಆಗುತ್ತದೆ ಎನ್ನುವುದಕ್ಕೆ ನಮ್ಮ ಶಾಸಕರನ್ನು ಹೊರಗಿಡುತ್ತಿದ್ದಾರೆ. ಹಾಗಾಗಿ ನಾವು ಈ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಪ್ರೇಮಾನಂದ್ ತಿಳಿಸಿದರು.
ಈ ವೇಳೆ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English