ಬೆಂಗಳೂರು: ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ನಲ್ಲಿ 9 ಪದಕ ಪಡೆದ ಏಳು ವಿಕಲಚೇತನ ಕ್ರೀಡಾಪಟುಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ. ಜಿ.ಪರಮೇಶ್ವರ್ ಅವರು ಗೃಹ ಕಚೇರಿಯಲ್ಲಿ ಇಂದು ಸನ್ಮಾನಿಸಿದರು.
ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನ ಗಳಿಸಿದ ರಕ್ಷಿತಾ ಆರ್., ಬೆಳ್ಳಿ ಹಾಗೂ ಕಂಚು ಪದಕ ವಿಜೇತೆ ವಿ.ರಾಧ, ಜಾವಲಿನ್ ಥ್ರೋ ವಿಭಾಗದಲ್ಲಿ ಕಂಚು ಪಡೆದ ಎನ್.ಎಸ್. ರಮ್ಯಾ, ಪ್ಯಾರ ಬ್ಯಾಡ್ಮಿಂಟನ್‌ನಲ್ಲಿ ಕಂಚು ವಿಜೇತ ಆನಂದ ಕುಮಾರ್, ಚೆಸ್‌ನಲ್ಲಿ ಚಿನ್ನದ ಪದಕ ವಿಜೇತ ಕಿಶನ್ ಗಂಗೋಲಿ, ಪ್ಯಾರಾ ಪವರ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ವಿಜೇತ ಫರ್ಮಾನ್ ಬಾಷಾ ಹಾಗೂ ಶಕಿನಾ ಕತುನ್ ಅವರಿಗೆ ಸಚಿವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್, ತಮ್ಮಂಥವರಿಗಾಗಿಯೇ ಪ್ರತ್ಯೇಕ ಸ್ಟೇಡಿಯಂ ನಿರ್ಮಿಸಿಕೊಡುವ ಬೇಡಿಕೆಯನ್ನು ಇವರು ಮುಂದಿಟ್ಟಿದ್ದಾರೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಕ್ರೀಡೆಗೆ ಸದಾ ಪ್ರೋತ್ಸಾಹಿಸುತ್ತದೆ. ಮುಂದಿನ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂದರ್ಭದಲ್ಲಿ ಪ್ಯಾರಾ ಒಲಂಪಿಕ್‌ಗಾಗಿಯೇ ಪ್ರತ್ಯೇಕ ಸ್ಟೇಡಿಯಂ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.
ಬಿಬಿಎಂಪಿಗೆ ಆಸ್ತಿ ತೆರಿಗೆ ಬಾಕಿ ಪಾವತಿಸುವಲ್ಲಿ ಯಾರೇ ಇದ್ದರೂ ಮುಂದಿನ ಮಾರ್ಚ್ ಒಳಗಾಗಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಈ ಆರ್ಥಿಕ ವರ್ಷದಲ್ಲಿ 3 ಸಾವಿರ ಕೋಟಿ ರೂ.ನಲ್ಲಿ ಈಗಾಗಲೇ 2031 ಕೋಟಿ ರೂ. ಸಂಗ್ರಹಿಲಾಗಿದ್ದು, ಮಾರ್ಚ್ ಒಳಗಾಗಿ ಈ ಗುರಿ ತಲುಪಲಿದ್ದೇವೆ. ಹಿಂದಿನ ಬಾಕಿ ತೆರಿಗೆಯು 2 ಸಾವಿರ ಕೋಟಿ ರೂ. ಇದ್ದು, 350 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದರು. ರೈತರ ಹಿತವೇ ನಮ್ಮ ಸರ್ಕಾರಕ್ಕೆ ಬಹಳ ಮುಖ್ಯ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯಿಂದ ರೈತರ ಬಗ್ಗೆ ಪಾಠ ಕಲಿಯಬೇಕಿಲ್ಲ. ಹಸಿರು ಕ್ರಾಂತಿ ನೀತಿ ಮಾಡಿದ್ದೇ ಕಾಂಗ್ರೆಸ್ ಎಂದರು.
Click this button or press Ctrl+G to toggle between Kannada and English