ಉಡುಪಿ: ಕಂಬಳ ಕ್ಷೇತ್ರದಲ್ಲಿ ಪದಕಗಳ ಮೇಲೆ ಪದಕ ಬಾಚಿ ಸಾಧನೆ ಮಾಡಿದ್ದ ರಾಕೆಟ್ ಮೋಡ ಖ್ಯಾತಿಯ ಕಂಬಳದ ಕೋಣ ಇನ್ನು ನೆನಪು ಮಾತ್ರ.
ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಕಂಬಳದ ಕೋಣ ಮೃತಪಟ್ಟಿದ್ದು, ಕರಾವಳಿಯ ಕಂಬಳ ಪ್ರಿಯರಿಗೆ ದುಃಖ ತಂದಿದೆ. ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ಈ ರಾಕೆಟ್ ಮೋಡ ಕೋಣದ್ದಾಗಿತ್ತು.
ಇದು ಮಾತ್ರವಲ್ಲದೆ, ಕಂಬಳ ಪ್ರಿಯರಿಗೆ ಇದು ಚಿರಪರಿಚಿತ ಕೋಣವಾಗಿತ್ತು. ಕೊಂಡೊಟ್ಟು ಮೋಡ, ರಾಕೆಟ್ ಮೋಡ ಎಂಬ ಹೆಸರಿನಿಂದಲೇ ಕಂಬಳ ಪ್ರಿಯರು ಇದನ್ನು ಕರೆಯುತ್ತಿದ್ದರು. ಪ್ರತಿಷ್ಠಿತ ಕಂಬಳ ಮನೆತನದ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಮನೆಯಲ್ಲಿದ್ದ ಈ ಓಟದ ಸರದಾರ ಬಳಿಕ ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಅವರ ಮನೆಯಲ್ಲಿತ್ತು. ನಂತರ ಹಲವು ದಿನಗಳಿಂದ ನಂದಳಿಕೆ ಶ್ರೀಕಾಂತ್ ಭಟ್ ಅವರ ಮನೆಯಲ್ಲಿತ್ತು.
ಕಂಬಳ ಕೋಣದ ಅಂತ್ಯ ಸಂಸ್ಕಾರವನ್ನು ಶಾಸ್ತ್ರಬದ್ಧವಾಗಿ ಮಾಡಿದ್ದು ವಿಶೇಷ ಮತ್ತು ಈ ವೇಳೆ ನೂರಾರು ಜನ ಕಂಬಳ ಪ್ರಿಯರು ಸೇರಿದ್ದು ಗಮನಾರ್ಹ.
Click this button or press Ctrl+G to toggle between Kannada and English