ಉಡುಪಿ / ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ರವಿವಾರ ನಡೆದ ಉಪ ಚುನಾವಣೆಯಲ್ಲಿ ಶೇ.68.26 ಮತ ಚಲಾವಣೆಯಾಗಿದೆ. ಕಳೆದ ಬಾರಿ ಇಲ್ಲಿ ಶೇ. 68.47 ಮತದಾನವಾಗಿತ್ತು.
2 ಜಿಲ್ಲೆಗಳ ಒಟ್ಟು 1,630 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಇವುಗಳಲ್ಲಿ ನಕ್ಸಲ್ ಪೀಡಿತ ಪ್ರದೇಶವೂ ಸೇರಿದಂತೆ ಅತಿ ಸೂಕ್ಷ್ಮ ಮತಗಟ್ಟೆಗಳು 251, ಸೂಕ್ಷ್ಮ ಮತಗಟ್ಟೆಗಳು 751 ಇದ್ದು ಗಂಭೀರ ಪ್ರಮಾಣದ ಅಹಿತಕರ ಘಟನೆಗಳು ನಡೆದಿಲ್ಲ.
ಉಡುಪಿ ಜಿಲ್ಲೆ-ಶೇ. 72.15, ಚಿಕ್ಕಮಗಳೂರು ಜಿಲ್ಲೆ- 64.36. ವಿಧಾನಸಭಾ ಕ್ಷೇತ್ರವಾರು ಮತದಾನ ವಿವರ ಇಂತಿದೆ: ಚಿಕ್ಕಮಗಳೂರು- ಶೇ. 59.19, ಕಾಪು- ಶೇ. 69.51, ಉಡುಪಿ- ಶೇ. 72.50, ಕಾರ್ಕಳ- ಶೇ. 74.12, ಶೃಂಗೇರಿ- ಶೇ. 73.93, ತರಿಕೆರೆ- ಶೇ. 58.75, ಮೂಡಿಗೆರೆ- ಶೇ. 65.60, ಕುಂದಾಪುರ- ಶೇ. 73.08.
ಚುನಾವಣೆ ಶಾಂತಿಯುತವಾಗಿತ್ತು. ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಬಿರುಸಿನ ಮತದಾನವಾಯಿತು.
ಹೆಜಮಾಡಿ, ಪಲಿಮಾರಿನ ಬೂತುಗಳಲ್ಲಿ ಮನೆಗಳಿಗೆ ಮುಟ್ಟಿಸಿದ ಚೀಟಿ ಗುರುತುಚೀಟಿಯಾಗಿರುವುದಿಲ್ಲ, ಚೀಟಿಯಲ್ಲಿ ಭಾವಚಿತ್ರ ಸರಿಯಾಗಿ ಕಾಣುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ ಸ್ವಲ್ಪ ಗೊಂದಲವಾದರೂ ಜಿಲ್ಲಾಧಿಕಾರಿ, ತಹಶೀಲ್ದಾರರ ಮಧ್ಯಪ್ರವೇಶದಿಂದ ಮತ ಚಲಾವಣೆಗೆ ಅವಕಾಶ ಕೊಡಲಾಯಿತು. ಮತಗಟ್ಟೆ ಹೊರಗೆ ಬೂತುಗಳಲ್ಲಿದ್ದ ಪಕ್ಷದ ಬಾವುಟ ತೆರವುಗೊಳಿಸಲು ಅಧಿಕಾರಿಗಳು ಹೇಳಿ ಸ್ವಲ್ಪ ತಕರಾರಿಗೆ ಕಾರಣವಾಯಿತು. ಅನಂತರ ಶಾಸಕರ ಮಧ್ಯಪ್ರವೇಶದಿಂದ ತಿಳಿಯಾಯಿತು.
ಮೂಡುಬೆಟ್ಟು ವಾರ್ಡಿನಲ್ಲಿ ಮತಯಂತ್ರ ಕೆಟ್ಟು ಕೆಲ ಕಾಲ ಮತದಾನ ಸ್ಥಗಿತವಾಯಿತು. ಪೆರ್ಡೂರು ಪಕ್ಕಾಲಿನಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಇಂದ್ರಾಳಿಯಲ್ಲಿ ಬ್ಯಾಲೆಟ್ ಯಂತ್ರದಲ್ಲಿ ಕಾಂಗ್ರೆಸ್ ಬಟನ್ ಇರುವಲ್ಲಿ ಬಿಳಿ ಚೀಟಿಯೊಂದನ್ನು ಅಂಟಿಸಿದ್ದು ಗೊತ್ತಾಗಿ ಅನಂತರ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿ ಸರಿಪಡಿಸಲಾಯಿತು.
ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದು ಕೆ. ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್), ಎಸ್.ಎಲ್. ಭೋಜೇಗೌಡ (ಜೆಡಿಎಸ್) ವಿ.ಸುನೀಲ್‌ಕುಮಾರ್ (ಬಿಜೆಪಿ) ಸಹಿತ ಪ್ರಮುಖ ಹುರಿಯಾಳುಗಳು ದಿನವಿಡೀ ಬೂತುಗಳಿಗೆ ಭೇಟಿ ನೀಡಿದರು.
ಹೆಬ್ರಿ, ಶಂಕರನಾರಾಯಣ ಠಾಣಾ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಿಗೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಅತಿಸೂಕ್ಷ್ಮ ಮತಗಟ್ಟೆಗಳಿಗೆ ವಿಶೇಷ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಎನ್‌ಎಫ್, ಕೇಂದ್ರೀಯ ಮೀಸಲು ಪಡೆ, ಡಿಎಆರ್ ಮೊದಲಾದ ಪೊಲೀಸ್ ಸಿಬಂದಿಗಳು ಹೊಯಿಗೆ ಚೀಲ, ಅಗ್ನಿಶಾಮಕ ದಳ ಇತ್ಯಾದಿ ವ್ಯವಸ್ಥೆಗಳೊಂದಿಗೆ ಬಂದೋಬಸ್ತ್ ಒದಗಿಸಿದರು. ವಯೋವೃದ್ಧರು, ಅಂಗವಿಕಲರು ಸೇರಿದಂತೆ ಮತದಾರರು ತುಂಬು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.
ಈ ಬಾರಿ ಚುನಾವಣಾ ಆಯೋಗದಿಂದ ಮತದಾರರ ಭಾವಚಿತ್ರ, ಮತಗಟ್ಟೆ ವಿವರ ಇರುವ ಚೀಟಿಯನ್ನು ವಿತರಿಸಿದ್ದರಿಂದ ಇದನ್ನೇ ಗುರುತುಚೀಟಿಯಾಗಿ ಬಳಸಲಾಯಿತು. ಹೀಗಾಗಿ ಪ್ರತ್ಯೇಕ ಗುರುತು ಚೀಟಿಯ ಅಗತ್ಯ ಬೀಳಲಿಲ್ಲ. ಇದು ಮತದಾರರಿಗೆ ಅನುಕೂಲಕರವಾಯಿತು. ಆದರೆ ಬೂತುಗಳಲ್ಲಿ ಕಾರ್ಯಕರ್ತರ ಸಂಖ್ಯೆ ಕಡಿಮೆಯಾಯಿತು.
ರವಿವಾರ ಸಂಜೆ, ರಾತ್ರಿ ಮತಗಟ್ಟೆಗಳಿಂದ ಮತ ಎಣಿಕೆ ಸ್ಥಳವಾದ ಉಡುಪಿ ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ ಮಾಧ್ಯಮ ಶಾಲೆಗೆ ಮತಯಂತ್ರಗಳನ್ನು ತಂದು ಸ್ಥಾಪಿಸಲಾಯಿತು. ಸಮೀಪದ ಮತಗಟ್ಟೆ ಕೇಂದ್ರದವರು ಶೀಘ್ರ ತಲುಪಿದರೆ ದೂರದ ಚಿಕ್ಕಮಗಳೂರು ಜಿಲ್ಲೆಯ ಮತಗಟ್ಟೆ ಕೇಂದ್ರದವರು ತಡವಾಗಿ ತಲುಪಿದರು. ಮಾ. 21 ರಂದು ಮತ ಎಣಿಕೆ ನಡೆಯಲಿದೆ.
Click this button or press Ctrl+G to toggle between Kannada and English