ಬೆಂಗಳೂರು: ಹಾರ್ಡ್ವೇರ್ ಆ್ಯಂಡ್ ನೆಟ್ವರ್ಕಿಂಗ್, ಸಾಫ್ಟ್ವೇರ್ ಆ್ಯಂಡ್ ಐಟಿ ಸೇವೆ ಹಾಗೂ ಗ್ರಾಹಕ ವಲಯದ ಉದ್ಯಮಗಳಲ್ಲಿ ಅತಿ ಹೆಚ್ಚಿನ ವೇತನ ಪಾವತಿಸುತ್ತಿರುವ ನಗರಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ.
ಲಿಂಕ್ಡ್ಇನ್ ಸಂಸ್ಥೆಯು ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಪ್ರಥಮ ಬಾರಿಗೆ ವೇತನ ಪಾವತಿ ಕುರಿತಂತೆ ಅಧ್ಯಯನ ನಡೆಸಿ ಈ ವರದಿ ಪ್ರಕಟಿಸಿದೆ. ತಂತ್ರಜ್ಞಾನ ಉದ್ಯಮದಲ್ಲಿ ಬೆಂಗಳೂರು ಅತಿ ಹೆಚ್ಚಿನ ಸಂಬಳ ಪಾವತಿಸುತ್ತಿದ್ದು, ಮುಂಬೈ ಮತ್ತು ದೆಹಲಿ ನಂತರದ ಸ್ಥಾನ ಪಡೆದಿವೆ.
ನಗರದ ಹಾರ್ಡ್ವೇರ್ ಆ್ಯಂಡ್ ನೆಟ್ವರ್ಕಿಂಗ್ ಉದ್ಯೋಗಿಗಳು ವರ್ಷಕ್ಕೆ ಸರಾಸರಿ ₹ 15 ಲಕ್ಷ ಸಂಬಳ ಪಡೆಯುತ್ತಿದ್ದರೆ. ಸಾಫ್ಟ್ವೇರ್ ನೌಕರರು ₹ 12 ಲಕ್ಷ ಹಾಗೂ ಗ್ರಾಹಕ ಸೇವಾ ವಲಯದ ಉದ್ಯೋಗಿಗಳು ವರ್ಷಕ್ಕೆ ₹ 9 ಲಕ್ಷ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಡಿಮೆ ವೆಚ್ಚದಲ್ಲಿ ವಿನೂತನ ಶೈಲಿಯಲ್ಲಿ ಚಿಪ್ಗಳನ್ನು ವಿನ್ಯಾಸ ಪಡಿಸುವ ಹಾರ್ಡ್ವೇರ್ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಸಂದಾಯವಾಗುತ್ತಿದೆ ಎಂಬ ಅಂಶವನ್ನ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಚಿಪ್ ವಿನ್ಯಾಸ ಅನುಷ್ಠಾನ ಭಾರತಕ್ಕೆ ಸ್ಥಳಾಂತರಗೊಂಡ ಬಳಿಕ ಸಂಬಳ ನೀಡಿಕೆ ಪ್ರಮಾಣ ಏರಿಕೆ ಆಗಿದೆ. ಸಾವಿರಾರು ಟ್ರಾನ್ಸಿಸ್ಟರ್ ಸಾಧನಗಳನ್ನು ಒಂದೇ ಚಿಪ್ನಲ್ಲಿ ಜೋಡಿಸುವ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ) ಪರಿಷ್ಕೃತಗೊಂಡಿದೆ. ಜೊತೆಗೆ ಹಾರ್ಡ್ವೇರ್ನ ವಿನ್ಯಾಸಗಳು ಆಕರ್ಷಣೆಯವಾಗಿ ಕಾಣಿಸುತ್ತಿವೆ. ಈ ಎಲ್ಲ ಬೆಳವಣಿಗೆಯಿಂದ ಕೇವಲ ಎರಡು ವರ್ಷಗಳ ಹಿಂದಿನ ಸಂಬಳ ಈಗ 4.5 ರಿಂದ 5 ಪಟ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ಆರ್&ಡಿ ಕಂಪನಿಯ ಶಿವಾನಂದ ಕೋಟೇಶ್ವರ್.
ಡಿಜಿಟಲ್ ರೂಪಾಂತರದ ಬೃಹತ್ ಪ್ರಮಾಣದ ದತ್ತಾಂಶ ವಿಸ್ತರಣೆಯು ನೆಟ್ವರ್ಕಿಂಗ್ ಉದ್ಯಮವನ್ನಾಗಿ ಪರಿವರ್ತಿಸಿದೆ. ಗ್ರಾಹಕರು ಸಂಕೀರ್ಣ ಮತ್ತು ಭದ್ರತೆಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರ್ಯಾಯವಾಗಿ ಕೌಶಲ್ಯಯುಕ್ತ ನೆಟ್ವರ್ಕಿಂಗ್ಗೆ ಬೃಹತ್ ಬೇಡಿಕೆ ಸೃಷ್ಟಿ ಆಗುತ್ತಿದೆ. ಕೃತಕ ಬುದ್ಧಿಮತ್ತೆ, ಯಾಂತ್ರಿಕ ಕಲಿಕೆ, ದ್ವಿಭಾಷಾ ಪ್ರೋಗ್ರಾಮ್ನಂತಹ ತಂತ್ರಾಂಶ ಮುನ್ನೆಲೆಗೆ ಬರುತ್ತಿರುವುದು ಸಹ ಸಂಬಳ ಏರಿಕೆಗೆ ಕಾರಣವೆಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
Click this button or press Ctrl+G to toggle between Kannada and English