ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು 45,724 ಮತಗಳ ಭರ್ಜರಿ ಅಂತರದೊಂದಿಗೆ ಗೆಲುವು ಸಾಧಿಸುವ ಮೂಲಕ, ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಅವರನ್ನು ಸೋಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆಯವರು 3,98,723 ಮತಗಳನ್ನು ಪಡೆದರೆ, ಬಿಜೆಪಿಯ ಸುನೀಲ್ ಕುಮಾರ್ 3,52,999 ಮತ ಗಳಿಸಿ ಪರಾಜಯಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಭೋಜೇಗೌಡ 72, 080 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಇಂದು ಬೆಳಿಗ್ಗೆ 8ಗಂಟೆಗೆ ಮತ ಎಣಿಕೆ ಆರಂಭಗೊಂಡಾಗ ಪ್ರಥಮ ಸುತ್ತಿನಲ್ಲಿಯೇ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸುನೀಲ್ ಕುಮಾರ್ ಅವರಿಗಿಂತ ಮುನ್ನಡೆ ಸಾಧಿಸಿದ್ದರು. ನಂತರದ 16 ಸುತ್ತುಗಳ ಮತ ಎಣಿಕೆಯವರೆಗೂ ಹೆಗ್ಡೆ ಮುನ್ನಡೆ ಸಾಧಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ.
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಪರಾಜಯಗೊಂಡಿರುವುದು ಮುಖಭಂಗ ಅನುಭವಿಸುವಂತಾಗಿದೆ. ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಸದಾನಂದ ಗೌಡರಿಂದ ತೆರವಾದ ಈ ಸ್ಥಾನಕ್ಕೆ ಮಾ.18ರಂದು ಚುನಾವಣೆ ನಡೆದಿತ್ತು.
2009ರಲ್ಲಿ ಸದಾನಂದ ಗೌಡರು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಕೇವಲ 27 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
Click this button or press Ctrl+G to toggle between Kannada and English