ಮಂಗಳೂರು: ಬೆಂಗ್ರೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಮಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇಂತಹ ಕೆಟ್ಟ ಘಟನೆಗಳಿಗೆ ಯುವಕರು ಗಾಂಜಾ, ಅಫೀಮು, ಚರಸ್ ನಂತಹ ಡ್ರಗ್ಸ್ ಸೇವಿಸುತ್ತಿರುವುದೇ ಕಾರಣ. ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಕೊನೆಗೊಳಿಸದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರುತ್ತವೆ.
ಪೊಲೀಸ್ ಇಲಾಖೆ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೂ ಶಾಸಕನಾಗಿ ನಾನು ಮುಕ್ತವಾಗಿ ಬೆಂಬಲಿಸುತ್ತೇನೆ. ಡ್ರಗ್ಸ್ ಮಾರಾಟಗಾರರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರೆ ಡ್ರಗ್ಸ್ ಮಾಫಿಯಾವನ್ನು ನಮ್ಮ ಜಿಲ್ಲೆಯಿಂದಲೇ ಓಡಿಸಬಹುದು.
ತಾವು ಶಾಸಕನಾಗಿ ಬಂದ ಬಳಿಕ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆನೂ ಹಿಂದೆಯೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ಕಾಮತ್ ಹೇಳಿದರು.
ಬೆಂಗ್ರೆ ಪ್ರದೇಶದಲ್ಲಿ ಪೊಲೀಸ್ ಹೊರ ಠಾಣೆಯ ಅಗತ್ಯ ಇದೆ ಎನ್ನುವುದರ ಬಗ್ಗೆ ಈಗಾಗಲೇ ಮಂಗಳೂರು ಪೊಲೀಸ್ ಕಮೀಷನರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲಿ ಆ ಬಗ್ಗೆ ಸೂಕ್ತ ವ್ಯವಸ್ಥೆ ಆಗಬೇಕಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಸುಸಜ್ಜಿತ ಪೊಲೀಸ್ ಠಾಣೆಯನ್ನು ನಿರ್ಮಿಸಲು ಉನ್ನತ ಪೊಲೀಸ್ ಅಧಿಕಾರಿಗಳು ಪ್ರಸ್ತಾಪನೆ ನೀಡಿದಲ್ಲಿ ರಾಜ್ಯಮಟ್ಟದಲ್ಲಿ ಗೃಹ ಇಲಾಖೆ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಸಿ ಬೆಂಗ್ರೆ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯ ನಿರ್ಮಾಣಕ್ಕೆ ಶಾಸಕನ ನೆಲೆಯಲ್ಲಿ ಶ್ರಮಿಸುವುದಾಗಿ ಶಾಸಕ ಕಾಮತ್ ಹೇಳಿದರು.
Click this button or press Ctrl+G to toggle between Kannada and English