ಮಂಗಳೂರು : ಮುಖ್ಯವಾಹಿನಿಯಲ್ಲಿ ಎಲ್ಲರೂ ಸಮಾನರಾಗಿ ಬದುಕಲು ವಿಕಲಚೇತನರಿಗೆ ಸರ್ಕಾರ ಸಂಘಸಂಸ್ಥೆಗಳ ಮೂಲಕ ಎಲ್ಲ ನೆರವು ನೀಡುತ್ತಿದ್ದು, ಈ ಸಂಬಂಧ ಸ್ವೀಕರಿಸಿದ ಮನವಿಗಳನ್ನು ಪರಿಶೀಲಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನಗರಾಭಿವೃದ್ಧಿ ಹಾಗೂ ವಸತಿ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧಿನಗರ, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೈಂಟ್ ಸೆಬೆಸ್ಟಿಯನ್ ಸಿಲ್ವರ್‍ಜುಬ್ಲಿ ಚರ್ಚ್ ಹಾಲ್ ಬೆಂದೂರ್‍ವೆಲ್ ಇಲ್ಲಿ ಆಯೋಜಿಸಲಾದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವಿಕಲಚೇತನರಲ್ಲಿ ವಿಶೇಷ ಸಾಮಾರ್ಥ್ಯಗಳಿದ್ದು, ಆ ಸಾಮಥ್ರ್ಯವನ್ನು ಗುರುತಿಸಿ ಅವರು ಬೆಳೆಯಲು ಎಲ್ಲ ರೀತಿಯ ಸಹಕಾರ ನೀಡುತ್ತಿರುವ ಸಂಸ್ಥೆಗಳು ಮತ್ತು ಅದರ ಶಿಕ್ಷಕರ ಸೇವೆಯು ಅಮೂಲ್ಯವಾಗಿದ್ದು ಎಲ್ಲರನ್ನೂ ಅಭಿನಂದಿಸಿದ ಸಚಿವರು ಮಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟ ಆಯೋಜಿಸುವುದಾಗಿಯೂ ಘೋಷಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆಯಾಗಿರುವ ಜಿಲ್ಲಾ ವಿಕಲಚೇತನರ ಇಲಾಖೆಯನ್ನು ಪ್ರತ್ಯೇಕ ಗೊಳಿಸಿ ಇನ್ನಷ್ಟು ಸಬಲಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ವಿಕಲಚೇತನರಿಗೋಸ್ಕರ ಆಯೋಜಿಸಲಾದ ಕ್ರೀಡಾ ಕೂಟದಲ್ಲಿ ಪಾಲ್ಗೊಂಡ 18 ಸಂಸ್ಥೆಗಳವರಿಗೆ ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ ಕಾಮತ್ ವಹಿಸಿದ್ದರು. ಸಮಾರಂಭವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಸ್ತೂರಿ ಪಂಜ ಉದ್ಘಾಟಿಸಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಲ್ಲನಗೌಡ ಪಾಟೀಲ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕೆ ಗಿರೀಶ್, ಜಗದೀಶ್ ಶೆಟ್ಟಿ ಮುಂತಾದವರು ಪಾಲ್ಗೊಂಡರು. ವಸಂತ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English