ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಹೊಸಕಟ್ಟೆ ಉತ್ಸವದೊಂದಿಗೆ ಧಾರ್ಮಿಕ ಪೂಜಾಕಾರ್ಯಗಳು ಪ್ರಾರಂಭಗೊಂಡವು. ಧರ್ಮಾ ಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಹೊಸಕಟ್ಟೆ ಉತ್ಸವದ ಪೂಜಾಕಾರ್ಯದ ವಿಧಿವಿಧಾನಗಳು ನೆರವೇರಿದವು.
ಸೋಮವಾರರಾತ್ರಿ ನಡೆದ ಹೊಸಕಟ್ಟೆ ಉತ್ಸವದ ಪ್ರಯುಕ್ತ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಲಾಲಾಕ್ಕಿ ಪಲ್ಲಕ್ಕಿಯಲ್ಲಿ ಕೂರಿಸಿ, ಅತ್ಯಂತ ವಿಜೃಂಭಣೆಯ ಮೆರವಣಿಗೆಯೊಂದಿಗೆ ವಸಂತಮಹಲ್ ನ ಹೊಸಕಟ್ಟೆಯ ಬಳಿ ಎಲ್ಲಾ ಭಕ್ತರ ಸಮ್ಮುಖದಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ದೇವಳದ ಆನೆ ಸ್ವಾಮಿಗೆ ಚಾಮರ ಬೀಸಿದವು.
ಈ ಸಂದರ್ಭದಲ್ಲಿ ಬಿರುದಾವಣಿ ಹಾಗೂ ಎರಡು ಬದಿಯಲ್ಲಿ ಪಂಜನ್ನು ಹಿಡಿಯಲಾಗಿತ್ತು. ಉತ್ಸವದಲ್ಲಿ ಸ್ವಾಮಿಗೆ ಸಂಗೀತ ಸೇವೆ, ವಾಲಗ, ಕೊಳಲು, ಚೆಂಡೆ, ಶಂಖ ಸೇವೆ, ಗೊಂಬೆಗಳು ಉತ್ಸವದ ಮೆರುಗನ್ನು ಹೆಚ್ಚಿಸುವಂತಿದ್ದವು.
ಸ್ವಾಮಿಗೆ ವಿಶೇಷ ವಿಧಾನದಲ್ಲಿ ಪೂಜೆಗಳು, ನೈವೇದ್ಯ ಸೇರಿದಂತೆ ವಿಧವಾದ ಸೇವೆಗಳನ್ನು ನೆರವೇರಿಸಲಾಯಿತು. ಮೊದಲಿಗೆ ದೇವರ ಗುಡಿಯೊಳಗೆ ಪಲ್ಲಕ್ಕಿಯನ್ನು ಹೊತ್ತು 16 ಸುತ್ತು ಬಂದ ಬಳಿಕ ಲಾಲಾಕ್ಕಿ ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಲಾಯಿತು. ವಸಂತಮಹಲ್ ನಲ್ಲಿ ಪೂಜಾವಿಧಾನಗಳನ್ನು ನೆರವೇರಿಸಿ ಜೊತೆಗಿದ್ದ ರಥದೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆ ಮರಳಿ, ಬೆಳ್ಳಿರಥದೊಂದಿಗೆ ಹೊಸಕಟ್ಟೆಉತ್ವವ ಪೂರ್ಣಗೊಂಡಿತ
ದೇವರನ್ನು ಹೊಸಕಟ್ಟೆಯಲ್ಲಿ ಕೂರಿಸಿದ ನಂತರ ಅಷ್ಟಬಗೆಯ ಪೂಜೆಗಳು ಸ್ವಾಮಿಗೆ ನಡೆಯುತ್ತವೆ. ಮೂರು ಬಗೆಯ ಸಂಗೀತ ಸೇವೆಯಲ್ಲಿ ಪೂಜೆಯು ಸಂಪನ್ನಗೊಂಡಿತು. ಈ ಬಾರಿಯೂ ಹೊಸಕಟ್ಟೆ ಉತ್ಸವದಂದು ಭಕ್ತರ ಹರಕೆಯಂತೆ ಬೆಳ್ಳಿ ರಥದ ಪಲ್ಲಕ್ಕಿಯನ್ನು ಎಳೆಯುವುದು ವಿಶೇಷವಾಗಿತ್ತು.ಬೆಳ್ಳಿ ರಥದ ಮೆರವಣಿಗೆ ಮುಗಿದ ಬಳಿಕ ದೇವರ ಮೂರ್ತಿಗೆ ಕೊನೆಯ ಮಂಗಳಾರತಿ ಮಾಡಿ, ಮೂರ್ತಿಯನ್ನು ದೇಗುಲದೊಳಗೆ ಕೊಂಡೊಯ್ಯಲಾಯಿತು.
ಧರ್ಮಸ್ಥಳವು ಈ ಬಾರಿಯೂ ದೀಪಾಲಂಕಾರಗಳಿಂದ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ. ಈ ಉತ್ಸವದ ಸಂದರ್ಭದಲ್ಲಿ ಇಲ್ಲಿಯ ಹಣತೆಗಳಿಗೆ ದೀಪ ಹಚ್ಚಿದರೆ ಸಂಕಷ್ಟಗಳು ಬಗೆಹರಿಯುತ್ತವೆ ಎಂಬ ನಂಬಿಕೆ ಇದೆ. ಈ ನಂಬಿಕೆಯಲ್ಲಿ ಹಲವಾರು ಭಕ್ತರು ಹಣತೆಯ ದೀಪ ಹಚ್ಚುತ್ತಿದ್ದುದು ಕಂಡುಬಂತು.
Click this button or press Ctrl+G to toggle between Kannada and English