ಬೆಂಗಳೂರು: ತಾಯಿ ಹಾಗೂ ತಂಗಿಯನ್ನ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೈದ್ಯ ಗೋವಿಂದ್ ಪ್ರಕಾಶ್ನನ್ನು ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ.
ತಾಯಿ ಹಾಗೂ ತಂಗಿಗೆ ಇಂಜೆಕ್ಷನ್ ನೀಡಿ ಸಾಯಿಸಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೈದ್ಯನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೋವಿಂದ್ ಗುಣಮುಖ ಎಂದು ವೈದ್ಯರು ರಿಪೋರ್ಟ್ ನೀಡಿದ ಬೆನ್ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಆರೋಪಿ ಪೊಲೀಸರ ಬಳಿ ತಾನು ಮಾಡಿದ ಕೃತ್ಯಕ್ಕೆ ಪಶ್ಚಾತಾಪ ಪಟ್ಟಿದ್ದಾನೆ. 48 ವರ್ಷ ಆದರೂ ಮದುವೆಯಾಗಿಲ್ಲ ಎಂದು ಸ್ನೇಹಿತರು ರೇಗಿಸುತ್ತಾ ಇದ್ದರು. ಹಾಗೇ ತಂಗಿಗೆ ಡಿವೋರ್ಸ್ ಆಗಿ ಮನೆಯಲ್ಲಿದ್ಲು. ಅಲ್ಲದೇ 10 ವರ್ಷದಿಂದ ತಲೆನೋವಿನಿಂದ ನಾನು ಬೇಸತ್ತಿದ್ದು, ಪ್ರತಿನಿತ್ಯ ಮೂರು ಬಾರಿ ತಪ್ಪದೇ ಮಾತ್ರೆ ತೆಗೆದುಕೊಳ್ಳುವ ಪರಿಸ್ಥಿತಿ ಇದೆ. ತಾಯಿಗೂ ಅನಾರೋಗ್ಯದ ಸಮಸ್ಯೆ ಬೇರೆ ಇತ್ತು ಎಂದು ಬೇಸರ ವ್ಯಕ್ತಪಡಿಸಿದ ಆರೋಪಿ, ತಾಯಿ ಮೂಕಾಂಬಿಕಾ ಹಾಗೂ ತಂಗಿ ಶ್ಯಾಮಲಾಗೆ ವಿಷದ ಇಂಜೆಕ್ಷನ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇದೀಗ ಪೊಲೀಸರು IPC ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ನವೆಂಬರ್ 30ರ ತಡರಾತ್ರಿ ಮನೆಯಲ್ಲಿಯೇ ತನ್ನ ತಾಯಿ ಹಾಗೂ ತಂಗಿಗೆ ಡಾ. ಗೋವಿಂದ್ ಓವರ್ ಡೋಸ್ ಇಂಜೆಕ್ಟ್ ಮಾಡಿದ್ದ ಪರಿಣಾಮ ಮರುದಿನ ಅಂದರೆ ಡಿಸೆಂಬರ್ 1ರ ಬೆಳಿಗ್ಗೆ ಆತನ ತಂಗಿ ಹಾಗೂ ತಾಯಿ ಮನೆಯಲ್ಲೇ ಸಾವನ್ನಪ್ಪಿದ್ದರು. ಡಾ. ಗೋವಿಂದ್ ಮೇಲೆ ಕೊಲೆ ಆರೋಪ ಮಾಡಿ ತಂದೆ ಸುಬ್ಬರಾವ್ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
Click this button or press Ctrl+G to toggle between Kannada and English